ಸುದ್ದಿಮೂಲ ವಾರ್ತೆ
ದೇವನಹಳ್ಳಿ,ಸೆ.11: ಗ್ರಾಮೀಣ ಮತ್ತು ನಗರ ಪ್ರದೇಶದ ಜನರು ಆರೋಗ್ಯದ ಕಡೆ ಹೆಚ್ಚಿನ ಒತ್ತು ನೀಡಬೇಕು. ಕಾಯಿಲೆಯ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿರಬೇಕು ಎಂದು ಮಹರ್ಷಿ ಆನಂದ ಗುರೂಜಿ ತಿಳಿಸಿದರು.
ಪಟ್ಟಣದ ಬಿಬಿ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ನೆಲಮಹಡಿಯಲ್ಲಿರುವ ಅಸ್ತ್ರ ಕ್ಲಿನಿಕ್ ವತಿಯಿಂದ ಆರೋಗ್ಯ ದಿನಾಚರಣೆ ಅಂಗವಾಗಿ ಉಚಿತ ಹೃದಯ ಮತ್ತು ಕ್ಯಾನ್ಸರ್ ಪರೀಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಆಹಾರ ಪದ್ಧತಿಗಳು ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯಿಂದ ಜನರು ಆರೋಗ್ಯವಂತರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿಗಳು ಬದಲಾಗಿರುವುದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಕಾಲಕಾಲಕ್ಕೆ ಮಳೆ ಬೆಳೆಯಾಗಬೇಕು. ರೈತರು ಸುಖ ಸಮೃದ್ಧಿಯ ಜೀವನ ನಡೆಸಬೇಕಾದರೆ ಆರೋಗ್ಯ ಬಹುಮುಖ್ಯ ಎಂದರು.
ಮಾಜಿ ಶಾಸಕ ಜಿ ಚಂದ್ರಣ್ಣ ಮಾತನಾಡಿ, ಇಂದಿನ ಆಧುನಿಕ ಒತ್ತಡದ ಜೀವನ ಶೈಲಿ ಹಾಗೂ ಆಹಾರ ಪದಾರ್ಥಗಳು ಬಹಳಷ್ಟು ರೀತಿಯ ಅನಾರೋಗ್ಯಗಳಿಗೆ ಕಾರಣವಾಗುತ್ತಿದೆ. ಗ್ರಾಮೀಣ ಮತ್ತು ನಗರ ಜನರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಇದೆ ವೇಳೆ ಅಸ್ತ್ರ ಕ್ಲಿನಿಕ್ನ ಮುಖ್ಯ ವೈದ್ಯಾಧಿಕಾರಿ ಡಾ. ಮಾನಸ ಪುಟ್ಟರಾಜು, ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಸಿ ಜಗನ್ನಾಥ್, ಸಮಾಜ ಸೇವಕ ಜಿ ಪುಟ್ಟರಾಜು, ತಾಲೂಕು ಬಿಜೆಪಿ ಖಜಾಂಚಿ ಜಿ.ಚನ್ನಕೇಶವ, ಮಾಜಿ ಪುರಸಭಾ ಸದಸ್ಯ ಜಿ ಜನಾರ್ಧನ್, ಪುರಸಭಾ ಸದಸ್ಯ ಜಿ.ಎ. ರವೀಂದ್ರ. ಮುಖಂಡರಾದ ಜಗದೀಶ್, ಮುನಿರಾಜ್, ದೊಡ್ಡವೆಂಕಪ್ಪ, ಸಿ ನಟರಾಜ್ ಮುಂತಾದವರು ಇದ್ದರು.