ಸುದ್ದಿಮೂಲ ವಾರ್ತೆ
ಮೈಸೂರು,ಸೆ.12:ಇಂದು ಕನ್ನಡ ಚಿತ್ರರಂಗ ದಿಕ್ಕುತಪ್ಪಿ, ಚುಕ್ಕಾಣಿ ಇಲ್ಲದ ಹಡಗಿನಂತೆ ಆಗಿದೆ. ಈಗಿನ ಕನ್ನಡದ ಹಾಡುಗಳನ್ನು ಕೇಳಲು ಹೆದರುವಂತಾಗಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಬಗ್ಗೆ ತೀವ್ರ ಅಸಮಾಧಾನವನ್ನು ಹೊರಹಾಕಿದರು.
ಮಂಗಳವಾರ ಜಿಲ್ಲಾ ಪರ್ತಕರ್ತರ ಸಂಘದ ಆಶ್ರಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಡಳಿಯನ್ನು ದೊಡ್ಡ ದೊಡ್ಡ ಮಹಾನಿಯರು ಕಟ್ಟಿದರು. ನಿರ್ಮಾಪಕ, ಪ್ರದರ್ಶಕ ಹಾಗೂ ವಿತರಕ ವಲಯವನ್ನ ಒಗ್ಗಟ್ಟಿನ ತ್ರಿಶೂಲವಾಗಿಟ್ಟುಕೊಂಡು ಕೆಲಸ ಮಾಡುವ ವ್ಯವಸ್ಥೆ ಇತ್ತು. ಇವತ್ತು ಪ್ಯಾನ್ ಇಂಡಿಯಾದ ವ್ಯಾಪಾರದ ಸೋಗು ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕನ್ನಡದಲ್ಲೇ ಬದುಕಬೇಕಾ ಅಥವಾ ಕನ್ನಡವನ್ನು ಇಟ್ಟುಕೊಂಡು ಎಲ್ಲರ ಜೊತೆಯಲ್ಲಿ ಬದುಕಬೇಕಾ ? ಎನ್ನುವ ದೊಡ್ಡ ಸಮಸ್ಯೆ ಎದುರು ನಿಂತಿದೆ. ಬಹು ಭಾಷೆಯಲ್ಲಿ ಒಂದೇ ಸಿನಿಮಾ ತೆಗೆಯುವುದರಿಂದ ಕನ್ನಡದ ಬಗ್ಗೆ ಹಾಡು ಹೇಳಲು, ಕೇಳಲು ಹೆದರುತ್ತಿವಂತಾಗಿದೆ. ಹೊಡಿ ಬಡಿ ಬಗೆಯ ಸಂಗೀತ ಇದು ಎಲ್ಲಾ ಭಾಷೆಗಳಲ್ಲಿ ಮ್ಯಾಚ್ ಆಗುತ್ತೆ ಅಂಥ ತಿಳಿದುಕೊಂಡಿದ್ದಾರೆ ಎಂದು ಟೀಕಿಸಿದರು.
ಕನ್ನಡದಲ್ಲಿ ಹೊಸ ನಿರ್ದೇಶಕರು 250 ಜನ ಇದ್ದಾರೆ, ಹೊಸ ನಿರ್ಮಾಪಕರು 500 ಜನ ಇದ್ದಾರೆ.
ಇವರು ಯಾರಿಗೂ ನಮ್ಮ ಚೇಂಬರ್ ನ ಸಂಪರ್ಕವೇ ಇಲ್ಲ ಎಲ್ಲರನ್ನ ಕರೆದು ಚರ್ಚೆ ಮಾಡುವವರೇ ಇಲ್ಲದಂತಾಗಿದೆ. ಮುಂದಿನ ದಿನದಲ್ಲಿ ಸುಸಂಸ್ಕೃತ ಮಾರ್ಗದಲ್ಲಿ ಕನ್ನಡ ಚಲನಚಿತ್ರ ರಂಗವನ್ನು ನಡೆಸುವಂತಾಗಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ಕಲಾ ನ್ಯಾಯ
ದಸರಾ ಉದ್ಘಾಟನೆ ನನಗೆ ಸಿಕ್ಕಿರುವುದು ಸಾಮಾಜಿಕ ಕಲಾ ನ್ಯಾಯ. ಹಬ್ಬದ ಮೂಲವೇ ರೈತ. ಅವರ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡಬೇಕು ಎಂಬುದು ನನ್ನಾಸೆ. ಸ್ಮಾರ್ಟ್ ಸಿಟಿಗಿಂತ ಸ್ಮಾರ್ಟ್ ವಿಲೇಜ್ ಆಗಬೇಕಿದೆ. ಕೃಷಿ ತಜ್ಞರು ಈ ಬಗ್ಗೆ ಚಿಂತಿಸಬೇಕು ಎಂದರು.
ದೆಹಲಿಗೆ ಬೇಡವಾದರೆ ನಮಗೂ ಬೇಡ
ಕನ್ನಡದ ಅಸ್ಮಿತೆ ಕಾಪಾಡುವ ಕೆಲಸವಾಬೇಕು. ಕನ್ನಡವನ್ನು ರಕ್ಷಿಸಬೇಕು. ಹಿಂದಿ ಹೇರಿಕೆ ಇಂದಿನಿಂದ ಅಲ್ಲ ತರಗತಿಯಿಂದ ಇದೆ. ದೆಹಲಿಗೆ ಕನ್ನಡ ಬೇಕಾಗಿಲ್ಲ ನಮಗೂ ಹಿಂದಿ ಬೇಕಾಗಿಲ್ಲ. ಹಿಂದಿ ಹೇರುವ ಹುನ್ನಾರ, ಹಿಂದಿನ ಕಾಲದಿಂದಲು ಕೂಡ ಇದೆ. ಈಗ ಅದು ಜಾಸ್ತಿಯಾಗಿದೆ ಎಂದು ಖಂಡಿಸಿದರು.
ಕನ್ನಡ ಶಾಲೆಗಳು ಬಂದ್ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಂಗ್ಲಿಷ್ ಇದ್ದರೆ ಮಾತ್ರ ಕೆಲಸ ಸಿಗುವುದು ಎಂಬ ಭಾವನೆ ಪೋಷಕರಲ್ಲಿ ಮೂಡಿದೆ. ಇಂಗ್ಲಿಷ್ ಕೆಲಸಕ್ಕೆ ಇಟ್ಟುಕೊಳ್ಳಿ ಕನ್ನಡದ ಅಸ್ಮಿತೆ ಉಳಿಸಲು ಕನ್ನಡ ಕಲಿಯಿರಿ. ಶಾಲೆಯಿಂದ ಮಾತ್ರವಲ್ಲ, ಮನೆಯಿಂದಲೇ ಕನ್ನಡ ಕಲಿಕೆ ಆಗಬೇಕು. ಆಗ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಆಗುತ್ತೆ ಎಂದು ವಿಶ್ಲೇಷಿಸಿದರು.
ಇದೇ ಸಂದರ್ಭದಲ್ಲಿ ಸನಾತನ ಧರ್ಮ ಮತ್ತು ಮಹಿಷಾ ದಸಾರ ಕುರಿತದ ಪ್ರಶ್ನೆಗೆ ಹಂಸಲೇಖ ಅವರು ಸನ್ನೆ ಮೂಲಕ ನೋ ಕಮೆಂಟ್ಸ್ ಎಂದರು.
ಜಿಲ್ಲಾ ಪರ್ತಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಪದಾಧಿಕಾರಿಗಳಾದ ಸುಬ್ರಮಣ್ಯ, ಅನುರಾಗ್ ಬಸವರಾಜ್, ರಂಗಸ್ವಾಮಿ ಇದ್ದರು.