ಸುದ್ದಿಮೂಲ ವಾರ್ತೆ
ಮೈಸೂರು, ಸೆ.12:ಶತಮಾನಗಳ ಇತಿಹಾಸ ಇರುವ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲೋಕನಾಥ್ ನೇಮಕವನ್ನು ಹೈಕೋರ್ಟ್ ರದ್ದು ಮಾಡಿ, ನೂತನ ಕುಲಪತಿ ನೇಮಕ ಮಾಡಲು ಶೋಧನಾ ಸಮಿತಿ ರಚನೆಗೆಆದೇಶ ಮಾಡಿದೆ.
ಲೋಕನಾಥ್ ಅವರ ನೇಮಕ ಕಾನೂನು ಬಾಹಿರ ಎಂದು ಪ್ರಶ್ನಿಸಿ ಪ್ರೊ. ಶರತ್ ಅನಂತಮೂರ್ತಿ ಕೋರ್ಟ್ ಮೊರೆ ಹೋಗಿದ್ದರು. ಲೋಕನಾಥ್ ಕುಲಪತಿಯಾಗಿ 3 ತಿಂಗಳಷ್ಟೇ ಕಾರ್ಯ ನಿರ್ವಹಿಸಿದ್ದರು. ಹೈಕೋರ್ಟ್ ನಲ್ಲಿ ದೂರು ದಾಖಲಾಗಿ ವಿಚಾರಣೆ ಆರಂಭವಾದ ನಂತರ ರಾಜ್ಯಪಾಲರು, ಹಣಕಾಸು ಮತ್ತು ದಿನೇ ದಿನೇ ಆಡಳಿತ ನಿರ್ವಹಣೆ ಮಾಡಲು ರಿಜಿಸ್ಟ್ರಾರ್ ಮತ್ತು ಹಣಕಾಸು ಅಧಿಕಾರಿಗೆ ಅಧಿಕಾರ ನೀಡಿದ್ದರು.
ಇದೇ ಪ್ರಥಮ ವಿಶ್ವವಿದ್ಯಾಲಯದ ಕಲಾಧಿಪತಿಗಳಾದ ರಾಜ್ಯಪಾಲರಿಂದ ನೇಮಕಗೊಂಡ ಕುಲಪತಿಯನ್ನು ನ್ಯಾಯಾಲಯ ಅಸಿಂಧುಗೊಳಿಸಿರುವುದು ಇದೇ ಪ್ರಥಮ. ಹಿಂದೆ 1996-97 ರಲ್ಲಿ ಪ್ರೊ. ಶಶಿಧರ್ ಪ್ರಸಾದ್ ಅವರನ್ನು ಕುಲಪತಿಯನ್ನಾಗಿ ನೇಮಕ ಮಾಡಿದ್ದ ಆದೇಶಕ್ಕೆ ಅಂದಿನ ರಾಜ್ಯಪಾಲರು ಸಹಿ ಮಾಡಿರಲಿಲ್ಲ. ಆದೇಶ ಹೊರ ಬೀಳುವ ಮುಂಚೆಯೇ ಮೊದಲೇ ಕುಲಪತಿಯನ್ನಾಗಿ ಮಾಡುವುದನ್ನು ಹಿಂತೆಗೆದುಕೊಂಡು, ಎಸ್. ಎಸ್. ಹೆಗ್ಡೆ ಅವರನ್ನು ಕುಲಪತಿಯನ್ನಾಗಿ ಮಾಡಲಾಯಿತು.
ಡಾ.ಶಶಿಧರ್ ಪ್ರಸಾದ್ ಅವರು ಸಿಂಡಿಕೇಟ್ ಸಭೆಗೆ ಹಾಜರಾಗುವುದನ್ನು ತಡೆದರು ಎಂದು ಅಂದಿನ ಕೆಲ ಸಿಂಡಿಕೇಟ್ ಸದಸ್ಯರು ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರ ಮೇಲೆ ಎಫ್ಐಆರ್ ಮಾಡಲಾಗಿತ್ತು. ಈ ಸಂಗತಿ ರಾಷ್ಟೀಯ ಆಂಗ್ಲ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಶಶಿಧರ್ ಪ್ರಸಾದ್ ಅವರನ್ನು ಕುಲಪತಿಯನ್ನಾಗಿ ಮಾಡುವ ಅದೇಶವನ್ನು ರಾಜ್ಯಪಾಲರು ಹಿಂತೆಗೆದುಕೊಂಡಿದ್ದರು.