ಸುದ್ದಿಮೂಲ ವಾರ್ತೆ
ಹೊಸಕೋಟೆ,ಸೆ.13: ಮನುಷ್ಯ ತನ್ನ ಜೀವನದಲ್ಲಿ ಬದುಕಿನ ಜೊತೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಯಶಸ್ವಿ ಜೀವನವನ್ನು ನಡೆಸುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು.
ಹೊಸಕೋಟೆ ನಗರದ ಹೊರವಲಯದ ಕಾಟಂ ನಲ್ಲೂರು ಗೇಟ್ ಬಳಿ ಇರುವ ವಿಜನ್ ಇಂಡಿಯಾ ಅಬಲಾಶ್ರಮಕ್ಕೆ ಭೇಟಿ ನೀಡಿ ಅಗತ್ಯವಾದ ದಿನಸಿ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದರು.
ಮನುಷ್ಯನಿಗೆ ಹುಟ್ಟು ಸಹಜ, ಸಾವು ನಿಶ್ಚಿತವಾಗಿದೆ. ಇದರ ನಡುವೆ ಜೀವಿಸುವ ದಿನಗಳಲ್ಲಿ ನ್ಯಾಯ,ನೀತಿ, ಧರ್ಮದ ಹಾದಿಯಲ್ಲಿ ಸಾಗಬೇಕು. ನಮ್ಮ ನಡುವಿನ ಸಮಾಜದಲ್ಲಿ ಅಸಂಖ್ಯಾತ ಮಂದಿ ನಿರ್ಗತಿಕರಿದ್ದಾರೆ. ಹುಟ್ಟುತ್ತಲೇ ತಂದೆ- ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳಿದ್ದಾರೆ. ಅಂತಹವರನ್ನು ಆರೈಕೆ ಮಾಡಿ ಬದುಕನ್ನು ಕಟ್ಟಿಕೊಡಲು ಹಲವಾರು ಅನಾಥಾಶ್ರಮಗಳು, ಅಬಲಾಶ್ರಮಗಳು ಅವಿರತ ಶ್ರಮಿಸುತ್ತಿವೆ.
ಆದ್ದರಿಂದ ಅನಾಥಾಶ್ರಮಗಳ ಜೊತೆಗೆ ಮನುಷ್ಯರಾದ ನಾವು ಕೂಡ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಇಂತಹ ಸತ್ಕಾರ್ಯಗಳಿಗೆ ಕೈ ಜೋಡಿಸುವ ಕೆಲಸ ಮಾಡಿ ಎಂದರು.
ನಮ್ಮ ರಾಜಕೀಯ ಜಂಜಾಟಗಳ ನಡುವೆಯೂ ಕೂಡ ಬಿಡುವಿನ ವೇಳೆಯಲ್ಲಿ ನಾನು ಬೆಂಗಳೂರು ನಗರ ಸೇರಿದಂತೆ ನಗರದ ಸುತ್ತಮುತ್ತ ಇರುವ ಆಶ್ರಮಗಳಿಗೆ ಭೇಟಿ ನೀಡಿ, ಅಲ್ಲಿನ ಮಕ್ಕಳ ಹಾಗೂ ಅಬಲೆಯರ ಯೋಗ ಕ್ಷೇಮ ವಿಚಾರಿಸಿ, ಅಗತ್ಯವಾದ ಧವಸ ಧಾನ್ಯಗಳನ್ನು ಕೊಡುವ ಕಾರ್ಯ ನಿರಂತವಾಗಿ ಮಾಡುತ್ತಿದ್ದೇನೆ. ಆದ್ದರಿಂದ ಬದುಕಿನ ನಡುವೆ ಮಾಡುವ ಸತ್ಕಾರ್ಯಗಳು ನಮ್ಮ ಜೀವನನ್ನು ಉನ್ನತಿಯ ಹಾದಿಗೆ ಕೊಂಡೊಯ್ಯುತ್ತದೆ ಎಂದರು.
ವಿಜನ್ ಇಂಡಿಯಾ ಅಬಲಾಶ್ರಮದ ಮುಖ್ಯಸ್ಥ ಜೋಬಿನ್ ಮಾತನಾಡಿ, ನಮ್ಮ ಅಬಲಾಶ್ರಮದಲ್ಲಿ ಬುದ್ದಿಮಾಂದ್ಯ ಮಹಿಳೆಯರು ಹೆಚ್ಚಾಗಿ ಇದ್ದು, ಅವರಿಗೆ ಸಕಾಲಕ್ಕೆ ಔಷಧೋಪಚಾರ ಜೊತೆಗೆ ಸಕಾಲಕ್ಕೆ ಊಟೋಪಚಾರ ನೀಡುತ್ತಿದ್ದೇವೆ. ನಮ್ಮ ಆಶ್ರಮಕ್ಕೆ ಎಂಟಿಬಿ ನಾಗರಾಜ್ ಅವರ ಕೊಡುಗೆ ಕೂಡ ಅನನ್ಯ ಎಂದರು.
ವಿಜನ್ ಇಂಡಿಯಾ ಅಬಲಾಶ್ರಮದ ಸಿಬ್ಬಂದಿ ಹಾಜರಿದ್ದರು.