ಸುದ್ದಿಮೂಲ ವಾರ್ತೆ
ಮೈಸೂರು, ಸೆ.14:ನಗರಕ್ಕೆ ಆಗಮಿಸಿದ್ದ ಜಂಬೂ ಸವಾರಿಯ ಮಾಜಿ ಕ್ಯಾಪ್ಟನ್ ಅರ್ಜುನ ಆನೆಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ತುರ್ತು ಹುಲಿ ಸೆರೆ ಕಾರ್ಯಾಚರಣೆಗೆ ಹೋಗಿದ್ದ ಕಾರಣ ಸೆ. 5 ರಂದು ಅರಮನೆಗೆ ಗಜಪಡೆ ಸ್ವಾಗತ ಕಾರ್ಯಕ್ರಮದಲ್ಲಿ ಗೈರಾಗಿತ್ತು. ಅರಮನೆಗೆ ಆಗಮಿಸಿದ ಅರ್ಜುನನಿಗೆ ಮಜ್ಜನ ಮಾಡಿಸಿ, ನಂತರ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.
ಹುಲಿ ಸೆರೆ ಕಾರ್ಯಾಚರಣೆಯಿಂದ ಹಿಂದಿರುಗಿದ ಅರ್ಜುನ ಆನೆಯನ್ನು ಅರಮನೆಯ ಬಲರಾಮ ದ್ವಾರದ ಮೂಲಕ ಅರಣ್ಯ ಇಲಾಖೆಯ ಲಾರಿಯಲ್ಲಿ ಆನೆ ಶೆಡ್ ಇರುವ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗಕ್ಕೆ ಕರೆತರಲಾಗಿದೆ. ಮೊದಲು ಅರ್ಜುನನಿಗೆ ಮಜ್ಜನ ಮಾಡಿಸಿ, ನಂತರ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗದಲ್ಲಿ ಅರ್ಚಕರು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು.
ಎರಡನೇ ಹಂತದ 5 ಆನೆಗಳು ಈ ತಿಂಗಳ ಕೊನೆಯ ವೇಳೆಗೆ ಆಗಮಿಸಲಿದ್ದು, ಸೆ. 15 ರಿಂದ ಗಜಪಡೆಗೆ ಭಾರ ಹೊರಿಸುವ ತಾಲೀಮು ಆರಂಭವಾಗಲಿದೆ ಎಂದು ಡಿಸಿಎಫ್ ಸೌರವ್ ಕುಮಾರ್ ತಿಳಿಸಿದ್ದಾರೆ.