ಸುದ್ದಿಮೂಲ ವಾರ್ತೆ
ಬೆಂಗಳೂರು,ಸೆ.14: ಯುವಜನತೆ ಈ ದೇಶದ ಉಜ್ವಲ ಭವಿಷ್ಯ. ದೇಶದ ಜವಾಬ್ದಾರಿ ಯುವಕರ ಹೆಗಲ ಮೇಲಿದೆ ಮತ್ತು ಮುಂದಿನ ಪೀಳಿಗೆಯೇ ರಾಷ್ಟ್ರದ ಏಕೈಕ ಆಶಾಕಿರಣವಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಸ್ವಾಯತ್ತ ಕ್ರಿಸ್ತು ಜಯಂತಿ ಕಾಲೇಜಿನ ರಜತ ಮಹೋತ್ಸವ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಕರು ಭ್ರಷ್ಟಾಚಾರವನ್ನು ನಿಲ್ಲಿಸುವ ಆಂದೋಲನವನ್ನು ಪ್ರಾರಂಭಿಸಬೇಕೆಂದು ವಿದ್ಯಾರ್ಥಿಗಳಿಗೆ ಒತ್ತಾಯಿಸಿದರು. ಕಾರ್ಮಿಕರ ಘನತೆ ಮತ್ತು ಪ್ರತಿಯೊಂದು ಕೆಲಸವನ್ನು ಗೌರವಿಸುವುದು ಈ ಸಮಯದ ಅಗತ್ಯವಾಗಿದೆ. ಪೌರಕಾರ್ಮಿಕರು, ದಿನಗೂಲಿ ಕಾರ್ಮಿಕರು, ರೈತರು ಹೀಗೆ ಎಲ್ಲ ವರ್ಗದ ಕಾರ್ಮಿಕರಿಗೆ ಗೌರವ ನೀಡಲು ಆದ್ಯತೆ ನೀಡಬೇಕು. ಶಿಕ್ಷಕರು ಯುವಕರಿಗೆ ಶಿಕ್ಷಣ ನೀಡುವ ಮೂಲಕ ನಿಸ್ವಾರ್ಥ ಕೆಲಸ ಮಾಡುತ್ತಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ.ನಿರಂಜನ ವಾನಳ್ಳಿ ಅವರು ಮಾತನಾಡಿ, ಯುವ ಪೀಳಿಗೆಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕ್ರಿಸ್ತು ಜಯಂತಿ ಕಾಲೇಜು ಉತ್ತಮ ಕೆಲಸ ಮಾಡುತ್ತಿದೆ. ಶೈಕ್ಷಣಿಕ ಚಟುವಟಿಕೆಯಲ್ಲಿ ತನ್ನ ಶ್ರೇಷ್ಠತೆಯನ್ನು ಕಾಯ್ದುಕೊಂಡಿರುವುದು 25 ವರ್ಷಗಳನ್ನು ಸಾಧಿಸಲು ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಫಾ. ಡಾ.ಅಬ್ರಹಾಂ ವೆಟ್ಟಿಯಂಕಲ್, ಕೆಜೆಸಿಯ ಸಂಶೋಧನಾ ಕೊಡುಗೆಗಳನ್ನು ಶ್ಲಾಘಿಸಿದ ಅವರು ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಅಂಗವಾಗಿ ಕೆಜೆಸಿಯು ಒಂದು ವರ್ಷದ ಅವಧಿಯಲ್ಲಿ ಡೀಮ್ಡ್ ಯೂನಿವರ್ಸಿಟಿಯಾಗಲಿ ಎಂದು ಹಾರೈಸಿದರು.