ಸುದ್ದಿಮೂಲ ವಾರ್ತೆ
ಕುಷ್ಟಗಿ,ಸೆ.16:ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಮುಖ್ಯ ಕೊಳಾಯಿ ಒಡೆದು ಕುಡಿಯುವ ನೀರು ಅಪಾರ ಪ್ರಮಾಣದಲ್ಲಿ ಪೋಲಾಗಿ ಚರಂಡಿ ಪಾಲಾಗುತ್ತಿದೆ.
ಗಜೇಂದ್ರಗಡ ಮುಖ್ಯರಸ್ತೆ ಬದಿಯ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ರಸ್ತೆ ಡಾಂಬರೀಕರಣ ಮಾಡಿ ಪೇವರ್ಸ್ ಜೋಡಣೆಗೆ ನೆಲ ಅಗೆದು ಕಡಿ ಹಾಕಲಾಗಿದೆ. ಆದರೆ, ಅಲ್ಲಿ ಕುಡಿಯುವ ನೀರಿನ ಮುಖ್ಯ ಕೊಳಾಯಿ ಹಾದುಹೋಗಿದೆ. ಅದರ ಪಕ್ಕದಲ್ಲಿಯೇ ಹೊಸ ಕೊಳಾಯಿ ಜೋಡಣೆ ಕಾಮಗಾರಿ ಸಂದರ್ಭದಲ್ಲಿ ಹಳೆಯ ಕೊಳಾಯಿಗೆ ಧಕ್ಕೆಯಾಗಿದೆ. ಮಾರನೆ ದಿನ ನೀರು ಹರಿಸಿದಾಗ ಅಪಾರ ಪ್ರಮಾಣದಲ್ಲಿ ಚರಂಡಿಗೆ ಹರಿದು ಹೋಗಿದೆ. ಪುರಸಭೆ ಅಧಿಕಾರಿಗಳು ಎಚ್ಚೆತ್ತು ಮುಖ್ಯ ಕೊಳಾಯಿ ದುರಸ್ತಿ ಕಾರ್ಯಕೈಗೊಳ್ಳಬೇಕು ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.
ನೀರಿನ ಸಮಸ್ಯೆ: ಪುರಸಭೆ ವ್ಯಾಪ್ತಿಯ 23 ಪೈಕಿ ಕೆಲ ವಾರ್ಡಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ನಾಲ್ಕೈದು ದಿನಕ್ಕೊಮ್ಮೆ ಪುರಸಭೆಯಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದರೆ, ನೀರು ಸಮರ್ಪಕವಾಗಿ ಸಿಗುತ್ತಿಲ್ಲ. ಈ ಬಗ್ಗೆ ಪುರಸಭೆ ಆಡಳಿತ ಎಚ್ಚೆತ್ತು ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಸರ್ಕಾರಿ ಆಸ್ಪತ್ರೆ ಬಳಿಯಲ್ಲಿ ಒಡೆದಿರುವ ಮುಖ್ಯ ಕೊಳಾಯಿಯನ್ನು ದುರಸ್ತಿಗೆ ಸಿಬ್ಬಂದಿಗೆ ಸೂಚಿಸಿದ್ದೇನೆ. ಅಲ್ಲದೆ ಪುರಸಭೆ ವ್ಯಾಪ್ತಿಗೆ ಬರುವ ಎಲ್ಲಾ 23 ವಾರ್ಡಗಳಲ್ಲಿ ಯಾವುದೇ ಸಮಸ್ಯೆ ಆಗದಂತೆ ಸಮರ್ಪಕವಾಗಿ ನೀರು ಸರಬರಾಜಿಗೆ ನಿಗಾವಹಿಸಲಾಗುವುದು ಎಂದು ಮುಖ್ಯಾಧಿಕಾರಿ ಧರಣೇಂದ್ರಕುಮಾರ ತಿಳಿಸಿದ್ದಾರೆ.