ಸುದ್ದಿಮೂಲ ವಾರ್ತೆ
ತಿಪಟೂರು, ಸೆ. 16 : ಮಹಿಳೆಯರಿಗಾಗಿಯೇ ಜನಸ್ಪಂದನ ಟ್ರಸ್ಟ್ ನೇತೃತ್ವದಲ್ಲಿ ಆರ್ಟಿಸ್ಟ್ ಫಾರ್ ಹರ್ ಸಹಯೋಗದಲ್ಲಿ “ನಮ್ಮ ಆರೋಗ್ಯ ಕೇಂದ್ರ”ವನ್ನು ತಿಪಟೂರಿನಲ್ಲಿ ಮೊದಲ ಬಾರಿಗೆ ಆರಂಭಿಸಲಾಗಿದೆ.
ಜನಸ್ಪಂದನ ಟ್ರಸ್ಟ್ ಅಧ್ಯಕ್ಷರಾದ ಸಿ.ಬಿ. ಶಶಿಧರ್ ಮಾತನಾಡಿ, ಆರೋಗ್ಯವಾಗಿದ್ದರೆ ಇಡೀ ಕುಟುಂಬ ಸದೃಢವಾಗಿರುತ್ತದೆ. ಅದೇ ರೀತಿ ಪ್ರತಿಯೊಬ್ಬರು ಆರೋಗ್ಯದಿಂದಿದ್ದರೆ ಸಮಾಜ ಸದೃಢವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ತಾಲೂಕಿನ ಮಹಿಳೆಯರಿಗೆ ಉತ್ತಮ ಆರೋಗ್ಯ ನೀಡುವ ಉದ್ದೇಶದಿಂದ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಪ್ರಾರಂಭ ಮಾಡುವ ಆಶಯ ಹೊಂದಿದ್ದೇವೆ ಹಾಗೂ ಮಹಿಳೆಯರಿಗೆ ದೈಹಿಕ ಸ್ತ್ರೀರೋಗದ ಸಮಸ್ಯೆಗಳ ಜತೆಗೆ ಮಾನಸಿಕ ಆರೋಗ್ಯಕ್ಕಾಗಿ ಸಮಾಲೋಚನೆ ಅವಶ್ಯಕವಿದ್ದು, ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಯೋಜನೆ ಇದೆ ಎಂದರು.
ಮುದ್ರಾ ಆಸ್ಪತ್ರೆಯ ಡಾ. ಆರ್ ಅನಿಲ್ ಅವರು ಮಾತನಾಡಿ, ಮಹಿಳೆಯರ ಆರೋಗ್ಯ,ಸಬಲೀಕರಣ ಹಾಗೂ ಶಿಕ್ಷಣ ಇವು ದೇಶದ ಅಭಿವೃದ್ಧಿಯ ಸೂಚ್ಯಂಕವಾಗಿದೆ. ಇಂದು ಗ್ರಾಮೀಣ ಮಹಿಳೆಯರು ಹಲವಾರು ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಿಂದ ಬಳಲುತ್ತಿದ್ದು, ಬಹಳ ಮುಖ್ಯವಾಗಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ನಾವು ಕೆಲಸ ಮಾಡಬೇಕಿದೆ ಎಂದರು.
ಮುದ್ರಾ ಆಸ್ಪತ್ರೆಯ ಡಾ. ರಮೇಶ್ ಬಾಬು ಮಾತನಾಡಿ, ಇಂದು ಮಹಿಳೆಯರ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಬಹಳ ಮುಖ್ಯವಾಗಿ ಮಕ್ಕಳಾಗದಿರುವುದು, ಮುಟ್ಟಿನ ಸಮಸ್ಯೆ ಹಾಗೂ ಅರಿವಿನ ಕೊರತೆ ಇದೆ. ಮಕ್ಕಳಾಗದಿರುವ ಸಮಸ್ಯೆಗಳು ಹೆಚ್ಚಾಗಿವೆ ಮತ್ತು ಗ್ರಾಮೀಣ ಮಹಿಳೆಯರಿಗೆ ಸೂಕ್ತ ಸಲಹೆ ಮತ್ತು ಸಮಾಲೋಚನೆ ಬಹಳ ಮುಖ್ಯ ಎಂದರು.
ಆರೋಗ್ಯ ಸಖಿಯರಿಗೆ ನುರಿತ ತಾಲ್ಲೂಕಿನ ನುರಿತ ವೈದ್ಯರಾದ ಡಾ. ಆರ್. ಅನಿಲ್ ಅವರು ಹಾಗೂ ಡಾ. ರಮೇಶ್ ಬಾಬು ಅವರು ಸಖಿಯರಿಗೆ ಸ್ತ್ರೀರೋಗ ಹಾಗೂ ಮಹಿಳೆಯರ ಆರೋಗ್ಯದ ವಿಷಯವಾಗಿ ಸೂಕ್ತ ಸಲಹೆ ನೀಡಿದರು ಮತ್ತು ಸಖಿಯರಿಗೆ ನೇಮಕಾತಿಪತ್ರ ಹಾಗೂ ಐಡಿ ಕಾರ್ಡ್ ವಿತರಿಸಿದರು. ನಮ್ಮ ಆರೋಗ್ಯ ಕೇಂದ್ರದ ಮೇಲ್ವಿಚಾರಕರಾದ ಶ್ರೀಕಾಂತ್ ಕೆಳಹಟ್ಟಿ ಹಾಗೂ ಎಲ್ಲಾ ಆರೋಗ್ಯ ಸಖಿಯರು ಹಾಜರಿದ್ದರು.