ಸುದ್ದಿಮೂಲ ವಾರ್ತೆ
ಮೈಸೂರು.ಸೆ.16:ಕಾಯಕ ಸಮಾಜದ ಪ್ರಮುಖರಾದ ಅಂಬಿಗರ ಚೌಡಯ್ಯ, ನುಲಿಯ ಚಂದಯ್ಯ, ಸಮಗಾರ ಹರಳಯ್ಯ ಹಾಗೂ ಮಾದರ ಚೆನ್ನಯ್ಯನಂತಹ ಹಲವಾರು ಶರಣರು ಕಾಯಕದ ಶ್ರೇಷ್ಠತೆಯನ್ನುಸಾರಿದ ಮಹಾಪುರುಷರು. ಅವರು ಸಮಾಜದಲ್ಲಿ ತಮ್ಮ ಕಾಯಕಗಳಿಗೆ ಬೆಲೆಕೊಟ್ಟು ಜೀವಿಸಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಹೇಳಿದರು.
ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನುಲಿಯ ಚಂದಯ್ಯ ಜಯಂತಿ ಆಚರಣೆ ಸಮಿತಿಯ ವತಿಯಿಂದ ನಗರದ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶರಣ ನುಲಿಯ ಚಂದಯ್ಯ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾರೂ ಕೂಡ ಹುಟ್ಟುವ ಮುನ್ನ ಈ ಜಾತಿ ಈ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ಹುಟ್ಟು ಆಕಸ್ಮಿಕ, ಸಾವು ಖಚಿತ. ಜಾತಿಯನ್ನು ತೊರೆದು ಕಾಯಕ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಬಸವಣ್ಣನವರ ಕೊಡುಗೆ ಅಪಾರ. ನುಲಿಯ ಚಂದಯ್ಯ ಸಮುದಾಯದವರ ನಿಗಮ ಮಂಡಳಿ ರಚನೆ, ಸಮುದಾಯ ಭವನ ನಿರ್ಮಾಣ, ವಿದ್ಯಾರ್ಥಿ ನಿಲಯ ನಿರ್ಮಾಣ ಹಾಗೂ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಜಾಪ್ರತಿನಿಧಿ ಸ್ಥಾನಮಾನಕ್ಕೆ ಅವಕಾಶ ನೀಡಬೇಕೆಂಬ ಮನವಿಯನ್ನು ಸ್ವೀಕರಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಬಂಧಕ ನಳರಾಜ್ ಮಾತನಾಡಿ, ಕಲ್ಯಾಣ ಎಂಬ ಪ್ರದೇಶದಲ್ಲಿ ಬಸವಣ್ಣನವರು ಸ್ಥಾಪಿಸಿದ್ದ ಅನುಭವ ಮಂಟಪದಲ್ಲಿ ನುಲಿಯ ಚಂದಯ್ಯ ನವರಿಗೂ ಸ್ಥಾನಮಾನವಿತ್ತು. ಬಸವಣ್ಣನವರ ಸಮಕಾಲೀನರಾದ ಚಂದಯ್ಯ ನವರ ಕಾಯಕ ಹಗ್ಗ ಹೆಣೆಯುವುದು. ಆದ್ದರಿಂದಲೇ ಇವರನ್ನು ನುಲಿಯ ಚಂದಯ್ಯ ಎಂದು ಕರೆಯಲಾಗುತ್ತಿತ್ತು. ಲಿಂಗಕ್ಕಿಂತ ಕಾಯಕ ಶ್ರೇಷ್ಠ ಎಂದು ನಂಬಿದ್ದ ಚಂದಯ್ಯರನ್ನು ನಾಸ್ತಿಕರು ಎಂದು ಕೆಲವರು ದೂರಿದರು. ದಾಸೋಹದಲ್ಲಿ ನಂಬಿಕೆ ಇಟ್ಟಿದ್ದ ಚಂದಯ್ಯನವರು ನಿರ್ಗತಿಕರಿಗೆ, ಬಡವರಿಗೆ , ಹಸಿದವರಿಗೆ ಹಂಚಿತಿನ್ನುವ ಸ್ವಭಾವದವರಾಗಿದ್ದರು ಎಂದು ತಿಳಿಸಿದರು.
ಅಂಬೇಡ್ಕರ್ ಸಂಶೋಧನಾ ತಂಡದವರಿಗೆ ಚಂದಯ್ಯನವರ 48 ವಚನಗಳು ದೊರೆತಿದ್ದು, ವಚನಗಳು ಚಂದೇಶ್ವರ ಅನ್ನುವ ಹೆಸರಿನಲ್ಲಿ ರಚಿತವಾಗಿವೆ. ಭಗವದ್ಗೀತೆಯಲ್ಲಿ ಕೃಷ್ಣ ಭೂಮಿ ಮೇಲೆ ಅಧರ್ಮ ಹೆಚ್ಚಾದಾಗ ನಾನು ಮತ್ತೆ ಹುಟ್ಟಿ ಬರುತ್ತೇನೆ ಎಂದರು. ಅಂತೆಯೇ ಬುದ್ಧನಾಗಿ, ಬಸವನಾಗಿ, ಅಂಬೇಡ್ಕರರಾಗಿ ನುಲಿಯ ಅವರು ಜಾತಿಯನ್ನು ಅಳಿಸಿ ಸಮಾನತೆಯನ್ನು ಕಾಪಾಡಲು ಜನ್ಮವೆತ್ತಿದಂತೆ ತೋರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪಿ. ಶಿವರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ. ಎನ್ ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕ ಡಾ. ಎಂ.ಡಿ ಸುದರ್ಶನ್, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್,, ನುಲಿಯ ಚಂದಯ್ಯ ಜಯಂತಿ ಆಚರಣಾ ಸಮಿತಿ ಅಧ್ಯಕ್ಷರಾಕೃಷ್ಣಶೆಟ್ಟಿ, ಕಾರ್ಯದರ್ಶಿ ಮೋಹನ್ ರಾಜ್ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಭಾಗವಹಿಸಿದ್ದರು.