ಸುದ್ದಿಮೂಲ ವಾರ್ತೆ
ಕೆ.ಆರ್.ಪುರ ಸೆ.16:ಅಜ್ಞಾನದ ಕತ್ತಲೆ ಲೋಕದಿಂದ ಜ್ಞಾನದ್ವೀಪ ಬೆಳಗಿದ ಸಾಮಾಜಿಕ ಧಾರ್ಮಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ಶ್ರೀನಾರಾಯಣ ಗುರುಗಳ ತತ್ತ್ವ ಆದರ್ಶಗಳು ಇಂದಿಗೂ ಪ್ರಸುತ್ತ ಎಂದು ಶಾಸಕಿ ಮಂಜುಳಾ ಲಿಂಬಾವಳಿ ಹೇಳಿದರು.
ಕೆ.ಆರ್.ಪುರದ ತಾಲ್ಲೂಕು ಆವರಣದಲ್ಲಿ ಪೂರ್ವ ತಾಲೂಕು ಆಡಳಿತ ಮತ್ತು ಆರ್ಯ ಈಡಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 169 ನೇ ಬ್ರಹ್ಮಶ್ರೀ ನಾರಾಯಣ ಗುರುಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಬೇರೂರಿದ ಜಾತೀಯತೆ, ಅಸ್ಪೃಶ್ಯತೆ, ಮೂಡನಂಬಿಕೆಯಂತಹ ಪಿಡುಗುಗಳನ್ನು ತೊಡೆದು ಹಾಕಲು ಜೀವನಪರ್ಯಂತ ಹೋರಾಡಿ ಸಮಾನತೆಗಾಗಿ ಶ್ರಮಿಸಿದ ಸಾಮಾಜಿಕ ಮತ್ತು ಧಾರ್ಮಿಕ ಹರಿಕಾರ ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿಚಾರ ಮತ್ತು ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಪ್ರತಿಯೊಂದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ತಲುಪಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಇದೇ ವೇಳೆ ಮಾತನಾಡಿದ, ಆರ್ಯ ಈಡಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜೇಂದ್ರ, ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಒದಗಿಸಿಕೊಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ತಹಶೀಲ್ದಾರ್ ವೈ ರವಿ , ಆರ್ಯ ಈಡಿಗರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಇದ್ದರು.