ದೇವನಹಳ್ಳಿ, ಸೆ.17 : ಚನ್ನರಾಯಪಟ್ಟಣ ಸಹಕಾರ ಸಂಘವು ರೈತರಿಗೆ ಜೀವನಾಡಿಯಾಗಿದ್ದು, ಸರ್ಕಾರದಿಂದ ರೈತರಿಗೆ ಬಡ್ಡಿ ರಹಿತವಾಗಿ ಬೆಳೆ ಸಾಲ ವಿತರಿಸಲಾಗುತ್ತಿದೆ. ರೈತರು ಸಾಲ ಪಡೆದು ಅಭಿವೃದ್ದಿಯಾದರೆ ಸಂಘಕ್ಕೆ ಸಾಲ ಮರುಪಾವತಿ ಮಾಡಿದರೆ ಸಂಘವು ಅಭಿವೃದ್ದಿಯಾಗುತ್ತದೆ ಎಂದು ಸಹಕಾರಿ ಸಂಘದ ಅಧ್ಯಕ್ಷ ಜಿ.ಲಕ್ಷ್ಮೀನಾರಾಯಣಪ್ಪ ತಿಳಿಸಿದರು.
ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ನಲ್ಲೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಂಘವು 2022-23 ನೇ ವರ್ಷದಲ್ಲಿ 21.90 ಲಕ್ಷ ರೂಪಾಯಿ ನಿವ್ವಳ ಲಾಭಗಳಿಸಿದ್ದು, ವಾರ್ಷಿಕವಾಗಿ 100 ಕೋಟಿ 33 ಲಕ್ಷ ನಡೆಸಲಾಗಿದೆ, 915 ಮಂದಿ ರೈತರಿಗೆ 5 ಕೋಟಿ 94 ಲಕ್ಷ ಕೃಷಿ ಸಾಲ ನೀಡಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ವರದರಾಜು ವರದಿ ಓದಿದರು.
ಬಿಡಿಸಿಸಿ ಬ್ಯಾಂಕಿನ ವೃತ್ತಿಪರ ನಿರ್ದೇಶಕ ಕಾಮೇನಹಳ್ಳಿ ರಮೇಶ್ ಮಾತನಾಡಿ, ಸಹಕಾರಿ ಸಂಘಗಳಲ್ಲಿ ಪಾರದರ್ಶಕತೆ ಕಾಪಾಡುವುದು ಹಾಗೂ ಕಾಲ ಕಾಲಕ್ಕೆ ಸದಸ್ಯರ ಸಲಹೆಗಳನ್ನು ಪಡೆದು ಸಂಘವನ್ನು ಅಭಿವೃದ್ಧಿಮಾಡಿಕೊಳ್ಳುವುದಕ್ಕಾಗಿ ವಾರ್ಷಿಕವಾಗಿ ಮಹಾಸಭೆಗಳನ್ನು ನಡೆಸಲಾಗುತ್ತದೆ. ಈ ಸಭೆಗಳ ಮೂಲಕ ಸದಸ್ಯರು, ಸಂಘದ ಸಂಪೂರ್ಣ ವಹಿವಾಟಿನ ಕುರಿತು ತಿಳಿದುಕೊಳ್ಳಬಹುದಾಗಿದೆ. ಹೆಚ್ಚು ಲಾಭಗಳಿಸುವುದು ಸಂಘದ ಮುಖ್ಯ ಉದ್ದೇಶವಲ್ಲ. ರೈತರಿಗೆ ಅನುಕೂಲ ಕಲ್ಪಿಸುವುದು ಮುಖ್ಯವಾದ ಉದ್ದೇಶವಾಗಿದೆ. ನಲ್ಲೂರು ಸಹಕಾರ ಸಂಘವೊಂದರಲ್ಲೆ 3 ಕೋಟಿ ಮನ್ನಾ ಆಗಿದೆ. ಜಿಲ್ಲಾ ಬ್ಯಾಂಕಿನಿಂದ ನೇರವಾಗಿ ಸಹಕಾರ ಸಂಘದಿಂದಲೇ ಸಾಲ ವಿತರಣೆ ಮಾಡಲಾಗುತ್ತದೆ. ಶೇ 3ರಷ್ಟು ಬಡ್ಡಿದರದಲ್ಲಿ ಕೊಡುತ್ತಿದ್ದೇವೆ. ರೈತರು ಸಾಲ ಪಡೆದುಕೊಂಡು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಮಹಿಳಾ ಸ್ವಸಹಾಯ ಸಂಘಗಳಿಗೆ ಹಾಗೂ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು
ಈ ಸಂಧರ್ಭದಲ್ಲಿ ತಾಪಂ ಮಾಜಿ ಸದಸ್ಯ ಲಕ್ಷ್ಮಣ್ ಗೌಡ,ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಎನ್.ಗಂಗಾಧರಮೂರ್ತಿ, ಬಿಡಿಸಿಸಿ ಬ್ಯಾಂಕಿನ ಮೇಲ್ವಿಚಕರಾದ ಸಿ. ಪ್ರಕಾಶ್,ಸಹಕಾರಿ ಸಂಘದ ಉಪಾಧ್ಯಕ್ಷ ಸುಭ್ರಮಣ , ನಿರ್ದೇಶಕರಾದ ಕೆ.ರಮೇಶ್, ಜಿ.ಲಲಿತೇಶ್, ವಿಶ್ವನಾಥ್, ಆನಂದ್, ಚಂದ್ರಪ್ಪ, ಯಶೋಧ್ ರೆಡ್ಡಿ, ಕೃಷ್ಣಪ್ಪ, ಕೆಂಪಯ್ಯ, ಕೆ.ಗಾಯಿತ್ರಿ, ಭಾಗ್ಯಮ್ಮ, ಪಿಳ್ಳಣ್ಣ, ಮಾಜಿ.ತಾಲ್ಲೂಕು ಪಂಚಾಯಿತಿ ಸದಸ್ಯ ಮಂಜುನಾಥ್, ಖಾದಿ ಬೋರ್ಡ್ ಅಧ್ಯಕ್ಷ ಮುನಿರಾಜು,ಗ್ರಾಪಂ ಮಾಜಿ ಸದಸ್ಯ ಶಿವಪ್ರಸಾದ್, ಕ್ಯಾಶಿಯರ್ ಸಂತೋಷ್ ಮುಂತಾದವರು ಹಾಜರಿದ್ದರು.