ಸುದ್ದಿಮೂಲ ವಾರ್ತೆ
ತುಮಕೂರು, ಸೆ. 19 : ಗಣೇಶ ಚತುರ್ಥಿಯ ಪ್ರಯುಕ್ತ ನಗರದ ಆರ್ಟ್ ಯೂನಿವರ್ಸ್ ವತಿಯಿಂದ ಆಯೋಜಿಸಿದ್ದ ಮಕ್ಕಳ ಕಿರು ರಂಗ ಪ್ರಯೋಗ ‘ದೇವರ ನ್ಯಾಯ’ವನ್ನು ಕನ್ನಡ ಚಿತ್ರ ರಂಗ ನಿರ್ದೇಶಕ ಅವಿನಾಶ್ ಶಠಮರ್ಷಣ ನಿರ್ದೇಶಿಸಿ ಪ್ರದರ್ಶಿಸಿದರು.
ಒಂದು ವಾರದ ಈ ರಂಗ ತರಬೇತಿಯಲ್ಲಿ ನಟನೆ, ರಂಗ ಗೀತೆ, ಬರವಣಿಗೆ ನಾಟಕದ ಕುರಿತಾಗಿ ಮಕ್ಕಳಲ್ಲಿ ಒಲವು ಮೂಡಿಸುವಲ್ಲಿ ಸಫಲರಾದರು.ಸುಮಾರು 40ಕ್ಕೂ ಹೆಚ್ಚು ಮಕ್ಕಳನ್ನೊಳಗೊಂಡ ಈ ನಾಟಕ ಪ್ರಯೋಗವು ಪ್ರೇಕ್ಷಕರು ಹಾಗೂ ಪೋಷಕರ ಮನಸೂರೆಗೊಂಡಿತು.
ಆರ್ಟ್ ಯೂನಿವರ್ಸ್ ಈಗಾಗಲೇ ಈ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮಕ್ಕಳಲ್ಲಿ ಕಲೆ ಹಾಗೂ ಕರ್ತವ್ಯಗಳ ಕುರಿತಾಗಿ ಜಾಗೃತಿ ಮೂಡಿಸುತ್ತಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗನಿರ್ದೇಶಕ ದೇವರಾಜ್ ಮೆಳೇಹಳ್ಳಿ, ಕಲೆ ಹಾಗೂ ಕಲಾವಿದರ ಕೊಡುಗೆ ಕುರಿತು ಹಾಗೂ ಅವರ ಸಹೋದರ ಉಮೇಶ್ ಡಮರುಗ ಅವರು ಪೋಷಕರು ಶಿಕ್ಷಕರ ಕರ್ತವ್ಯದ ಬಗ್ಗೆ ಚುಟುಕಾಗಿ ತಿಳಿಸಿದರು.
ಇನ್ನು ಲಕ್ಷಣ ಧಾರಾವಾಹಿಯ ಡೆವಿಲ್ ಎಂದೇ ಖ್ಯಾತರಾಗಿರುವ ಪ್ರಿಯಾ ಶಠಮರ್ಷಣ ಅವರ ರಂಗ ಸಂಗೀತವೂ ಪ್ರೇಕ್ಷಕರನ್ನು ವಿಸ್ಮಯಗೊಳಿಸಿತು.
ಆರ್ಟ್ ಯೂನಿವರ್ಸ್ ಸಂಸ್ಥಾಪಕರಾದ ಚಿದಾನಂದ ಅವರು ಮಾತನಾಡಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಕಲೆಯ ಪಾತ್ರ ಮಹತ್ವದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ವಕೀಲರಾದ ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.