ಸುದ್ದಿಮೂಲ ವಾರ್ತೆ
ಕೆ.ಆರ್.ಪುರ.ಸೆ.23:ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ನಿರಂತರ ಅನ್ಯಾಯದ ವಿರುದ್ಧ ರತ್ನ ಭಾರತ ರೈತ ಸಮಾಜದ ಕಾರ್ಯಕರ್ತರು ಕೆ.ಆರ್.ಪುರದ ರಾಷ್ಟ್ರೀಯ ಹೆದ್ದಾರಿ ಬಳಿಯ ಬಿಬಿಎಂಪಿ ಕಚೇರಿ ಮುಂದೆ ತಲೆ ಬೊಳಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
ಬಿತ್ತಿ ಪತ್ರಗಳನ್ನು ಹಿಡಿದು ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.
ರತ್ನ ಭಾರತ ರೈತ ಸಮಾಜದ ರಾಜ್ಯಾಧ್ಯಕ್ಷ ಲಕ್ಷ್ಮಣ್ ಪ್ರತಿಭಟನಾ ನೇತೃತ್ವ ವಹಿಸಿ ಮಾತನಾಡಿ, ಬೆಂಗಳೂರು ನಗರದಲ್ಲಿ ಒಂದೂವರೆ ಕೋಟಿ ಜನಸಂಖ್ಯೆ ಇದ್ದು ಬಹುತೇಕ ಕಾವೇರಿ ನೀರಿಗಾಗಿ ಅವಲಂಬಿತರಾಗಿದ್ದಾರೆ. ಕಾವೇರಿ ಜಲಾಶಯದಲ್ಲಿ ಇರುವ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದರೆ ಇಲ್ಲಿನ ಜನರು ಪರಿತಪಿಸುವಂತಾಗುತ್ತದೆ. ಕಾವೇರಿ ನೀರಿಗೆ ಕಂಟಕ ಎದುರಾಗಿರುವುದರಿಂದ ಪ್ರತಿಯೊಬ್ಬರು ಹೋರಾಟದ ಭಾಗವಾಗಬೇಕು ಎಂದು ಎಚ್ಚರಿಕೆ ನೀಡಿದರು.
ಕಾವೇರಿ ನೀರಿಗಾಗಿ ಯಾವುದೇ ಪಕ್ಷ ರಾಜಕೀಯ ಮಾಡದೆ ರೈತರ ಹಿತಾಸಕ್ತಿ ಕಾಪಾಡಬೇಕು. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಪಕ್ಷಗಳು ರೈತರ ಬಗ್ಗೆ ಕಾಳಜಿ ವಹಿಸಬೇಕು. ಈ ಕೂಡಲೇ ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ರತ್ನ ಭಾರತ ರೈತ ಸಮಾಜದ ಪದಾಧಿಕಾರಿಗಳಾದ ನಂದೀಶ್ ಗೌಡ, ನಾಗರಾಜ್ ಇದ್ದರು.