ಸುದ್ದಿಮೂಲ ವಾರ್ತೆ
ಮೈಸೂರು, ಸೆ.25: ಕಾವೇರಿಗೆ ನ್ಯಾಯ ಸಿಗದ ಕಾರಣ ನಡೆಯುತ್ತಿರುವ ಹೋರಾಟದ ಕಿಚ್ಚು ಹೆಚ್ಚಾಗಿದೆ. ಸೋಮವಾರ ರಾಜ್ಯದ ಹಲವಡೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಮತ್ತು ಕಾವೇರಿ ಜಲ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಬಂದ್ಗೆ ನಟ, ನಟಿಯರು ಕಾವೇರಿ ನ್ಯಾಯಕ್ಕಾಗಿ ಕೈಜೋಡಿಸಿದ್ದಾರೆ.
ಮಂಡ್ಯದಲ್ಲಿ ಪಟಾಪಟಿ ಚಡ್ಡಿ ಹಾಕಿಕೊಂಡು, ಹಾಸನದಲ್ಲಿ ಹೇಮಾವತಿ ಜಲಾಶಯಕ್ಕೆ ಮುತ್ತಿಗೆ ಹಾಕಿ, ಮೈಸೂರಿನಲ್ಲಿ ವೃದ್ಧೆಯೊಬ್ಬರು ರಸ್ತೆಯಲ್ಲಿ ಉರುಳಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಯೇ ಚಾಮರಾಜನಗರದಲ್ಲಿ ರಾಜ್ಯ ಸರ್ಕಾರಕ್ಕೆ ಕಿವಿ ಕೇಳುವುದಿಲ್ಲ ಎಂದು ಗಂಟೆ ಬಾರಿಸುವ ವಿನೂತನ ಪ್ರತಿಭಟನೆ ಮಾಡಿದ್ದಾರೆ. ಹಿರಿಯ ನಟಿ ಲೀಲಾವತಿ, ನಟ ವಿನೋದ್ರಾಜ್, ನಟ ದರ್ಶನ್ ಭಾಗಿಯಾಗಿದ್ದಾರೆ.
ಚಡ್ಡಿ ಮೆರವಣಿಗೆ
ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಸೇನೆ ಕಾರ್ಯಕರ್ತರು ಮಂಡ್ಯದಲ್ಲಿ ಪಟಾಪಟಿ ಚಡ್ಡಿ ಮೆರವಣಿಗೆ ನಡೆಸಿದರು. ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಪಟಾಪಟಿ ಚಡ್ಡಿ ಧರಿಸಿ ಖಾಲಿ ಬಿಂದಿಗೆ ಪ್ರದರ್ಶಿಸಿ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಿಲ್ಲೆಯ ಶಾಸಕ–ಸಂಸದರ ವಿರುದ್ಧ ಧಿಕ್ಕಾರ ಕೂಗುತ್ತಾ ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ಧರಣಿ ನಡೆಸುತ್ತಿರುವ ಸ್ಥಳಕ್ಕೆ ತೆರಳಿ ಕಾವೇರಿ ಹೋರಾಟ ಬೆಂಬಲಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಪ್ರತಿಭಟನಾಕಾರರು ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಮಹಾಂತಪ್ಪ ನಂದೀಶ್, ಮಂಜುನಾಥ್, ಗುತ್ತಲು ಚಂದ್ರು, ಜಯಮ್ಮ, ದರ್ಶನ್, ರಾಜೇಶ್, ನಂದೀಶ್ ನೇತೃತ್ವ ವಹಿಸಿದ್ದರು.
ನಟಿ ಲೀಲಾವತಿ
ಮಂಡ್ಯದಲ್ಲಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನಡೆಸುತ್ತಿರುವ ನಿರಂತರ ಧರಣಿಯಲ್ಲಿ ಭಾಗಿಯಾಗುವ ಮೂಲಕ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಮತ್ತು ಅವರ ಪುತ್ರ ನಟ ವಿನೋದ್ ರಾಜ್ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.ಧರಣಿ ಸ್ಥಳಕ್ಕೆ ಭೇಟಿ ನೀಡಿದ ಅವರು ಇಳಿ ವಯಸ್ಸಿನಲ್ಲಿಯೂ ಹೋರಾಟ ಮಾಡುವ ಮೂಲಕ ಕಾವೇರಿ ಚಳವಳಿಗೆ ಸ್ಫೂರ್ತಿಯಾದರು. ನಟಿ ಲೀಲಾವತಿ, ವಿನೋದ್ ರಾಜ್ ಬಂದೊಡನೆ ಹಿತರಕ್ಷಣ ಸಮಿತಿಯ ಸದಸ್ಯರು ಆತ್ಮೀಯವಾಗಿ ಬರಮಾಡಿಕೊಂಡು ಪ್ರೀತಿ ತೋರಿದರು.
ಹೇಮಾವತಿ ಡ್ಯಾಂಗೆ ಮುತ್ತಿಗೆ
ಹಾಸನ ಜಿಲ್ಲೆಯಲ್ಲೂ ಕಾವೇರಿ ಹೋರಾಟ ಜೋರಾಗಿದ್ದು, ಜೆಡಿಎಸ್ನಿಂದ ಗೊರೂರಿನಲ್ಲಿ ಇರುವ ಹೇಮಾವತಿ ಡ್ಯಾಂಗೆ ಮುತ್ತಿಗೆ ಯತ್ನ ನಡೆಯಿತು. ಇದೇ ವೇಳೆ ಕರವೇಯಿಂದಲೂ ಪ್ರತಿಭಟನೆ ನಡೆಯಿತು. ಹೇಮಾವತಿ ಡ್ಯಾಂಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಗೇಟ್ ಬಳಿಯೇ ಪೊಲೀಸರು ತಡೆದರು. ಆಗ ಪ್ರತಿಭಟನಾಕಾರರು ರಸ್ತೆಯಲ್ಲೇ ಮಲಗಿ ಆಕ್ರೋಶ ಹೊರ ಹಾಕಿದರು. ಮುನ್ನೆಚ್ಚರಿಕೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್, ಮಾಜಿ ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಕೆ.ಎಸ್.ಲಿಂಗೇಶ್ ಜಿಲ್ಲಾ ವಕ್ತಾರ ಹೊಂಗೆರೆ ರಘು, ಹಾಸನ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಆಲೂರು ಅಧ್ಯಕ್ಷ ಕೆ.ಎಸ್.ಮಂಜೇಗೌಡ, ನಗರಸಭೆ ಸದಸ್ಯರಾದ ಸಿ.ಆರ್. ಶಂಕರ್, ಅಮೀರ್ ಜಾನ್, ಚಂದ್ರೇಗೌಡ , ಮುಖಂಡರಾದ ಕಾರ್ಲೇ ಇಂದ್ರೇಶ್, ಬನವಾಸೆ ರುದ್ರಪ್ಪ, ರಾಮಘಟ್ಟ ಜಗದೀಶ್, ನಂಜುಂಡಸ್ವಾಮಿ ಇದ್ದರು.
ಹೋರಾಟದಲ್ಲಿ ದರ್ಶನ್ ಭಾಗಿ
ಮೈಸೂರು ಜಿಲ್ಲೆ ಬನ್ನೂರಿನಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟ ಭಾಗಿಯಾದ ನಟ ದರ್ಶನ್ ಮಾತನಾಡಿ, ದರ್ಶನ್, ಸುದೀಪ್’ ಶಿವಣ್ಣ’ ಯಶ್’ ಅಭಿ’ ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ? ಎಂದು ಜನರಲ್ಲಿ ಪ್ರಶ್ನೆ ಮಾಡಿದರು.ಕಾವೇರಿ ಹೋರಾಟದಲ್ಲಿ ಅವ್ರು ಬರ್ಲಿಲ್ಲ ಇವ್ರು ಬರ್ಲಿಲ್ಲ ಅಂತೀರಾ, ಇತ್ತೀಚೆಗೆ ತಮಿಳು ಚಿತ್ರದಲ್ಲಿ ಕೋಟಿ ಕೋಟಿ ಮಾಡಿದವನು ಕಾಣ್ತೀಲ್ವ? ಇತ್ತೀಚೆಗೆ ಒಬ್ಬ ವಿತರಕ ತಮಿಳು ಚಿತ್ರದಿಂದ 36 ಕೋಟಿ ಮಾಡಿದ. 6 ಕೋಟಿ ಹಾಕಿದ ಚಿತ್ರಕ್ಕೆ 36 ಕೋಟಿ ಮಾಡ್ದ. ತಮಿಳು ಚಿತ್ರ ನೋಡಿ ದುಡ್ಡು ಕೊಟ್ಟಿದ್ದು ನೀವೇ ತಾನೇ ಆವನಿಗೆ ಯಾಕೆ ಕೇಳಲ್ಲ ಪ್ರಶ್ನೆ ಮಾಡಿದರು.
ಗಂಟೆ ಬಾರಿಸುವ ಚಳವಳಿ
ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಕಾವೇರಿ ನದಿ ನೀರು ವಿವಾದದ ಹೋರಾಟದ 22 ನೇ ದಿನವಾದ ಸೋಮವಾರ ಕಿವಿ ಕೇಳಿಸದ ರಾಜ್ಯ ಸರ್ಕಾರಕ್ಕೆ ಗಂಟೆ ಹೊಡೆಯುವ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು.
ಶ್ರೀ ಚಾಮರಾಜೇಶ್ವರ ಉದ್ಯಾನವನ ಮುಂಭಾಗದಿಂದ ದೊಡ್ಡ ಗಂಟೆಯನ್ನು ಹೊತ್ತುತಂದ ಕನ್ನಡ ಚಳವಳಿಗಾರರು ಶ್ರೀ ಭುವನೇಶ್ವರಿ ವೃತ್ತದಲ್ಲಿ ಇಟ್ಟು ರಾಜ್ಯ ಸರ್ಕಾರ ಮತ್ತು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ವಿರುದ್ದ ಘೋಷಣೆ ಕೂಗಿ ಗಂಟೆ ಬಾರಿಸುತ್ತಾ ಕಿವಿಡಾಗಿರುವ ರಾಜ್ಯ ಸರ್ಕಾರವು ಈಗಲಾದರೂ ಎಚ್ಚೆದ್ದುಕೊಂಡು ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುವುದನ್ನು ನಿಲ್ಲಿಸಬೇಕು, ರಾಜ್ಯದ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು. ಸೇನಾಪಡೆಯ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಕುಮಾರ್, ರಾಜು , ಗು.ಪುರುಷೋತ್ತಮ್ ಸೇರಿದಂತೆ ಹಲವಾರು ಮಂದಿ ಭಾಗಿಯಾಗಿದ್ದರು.
ಬೆಂಗಳೂರು ಹಾಗೂ ಕರ್ನಾಟಕ ಬಂದ್ ಗಳಿಗೂ ನಮ್ಮ ಬೆಂಬಲವಿದೆ ಎಂದು ಮಂಡ್ಯದಲ್ಲಿ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ನಾಳೆಯ ಪ್ರಾಧಿಕಾರದ ಸಭೆಯ ನಿರ್ಧಾರ ತುಂಬಾ ಮುಖ್ಯವಾಗಿದೆ. ಇದು ಗಂಭೀರ ವಿಚಾರ, ಯಾರು ಬಂದ್ ಮಾಡಿದರೂ ಬೆಂಬಲಿಸಲಾಗುವುದು ಎಂದರು.