ಸುದ್ದಿಮೂಲ ವಾರ್ತೆ
ಮಡಿಕೇರಿ, ಸೆ.25: ಜನತಾ ದರ್ಶನದ ಮೂಲಕ ಜನರ ಬಳಿಗೆ ಸರ್ಕಾರವನ್ನು ಕೊಂಡೊಯ್ಯುವಲ್ಲಿ ಕೊಡಗು ಜಿಲ್ಲೆಯ ನಾಪೋಕ್ಲು ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ವಿನೂತನ ಪ್ರಯತ್ನಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಚಾಲನೆ ನೀಡಿದರು.
ಶಾಸಕರಾದ ಎ.ಎಸ್.ಪೊನ್ನಣ್ಣ ಡಾ.ಮಂತರ್ ಗೌಡ, ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ಗ್ರಾ.ಪಂ. ಅಧ್ಯಕ್ಷರಾದ ವನಜಾಕ್ಷಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಇತರರು ಪಾಲ್ಗೊಂಡಿದ್ದರು.
ಸರ್ಕಾರದ ಗ್ಯಾರಂಟಿ ಯೋಜನೆಗಳ ಜೊತೆಗೆ ವಿವಿಧ ಇಲಾಖೆಗಳ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಮಳಿಗೆಯನ್ನು ಸಚಿವರು ಮತ್ತು ಶಾಸಕರು ವೀಕ್ಷಿಸಿದರು.
ಜನತಾ ದರ್ಶನ ಕಾರ್ಯಕ್ರಮದ ಸಂದರ್ಭದಲ್ಲಿ ಸುಮಾರು 170 ಕ್ಕೂ ಹೆಚ್ಚು ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದು, ಕೆಲವು ಅರ್ಜಿಗಳಿಗೆ ಸ್ಥಳದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವರು ಪರಿಹರಿಸಿದರು.
ಜನತಾ ದರ್ಶನದಲ್ಲಿ ಸುಮಾರು ಒಂದು ಸಾವಿರದಷ್ಟು ಜನರು ಪಾಲ್ಗೊಂಡಿದ್ದರು. ಸಭೆಯ ಆರಂಭದಲ್ಲಿ ಮಾತನಾಡಿದ ಸಚಿವ ಭೋಸರಾಜು ಅವರು, ಗ್ರಾಮೀಣ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು ಎಂಬ ಉದ್ದೇಶದಿಂದ ಜನತಾ ದರ್ಶನ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಅವರು ಎಲ್ಲಾ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳುವಂತೆ ಸೂಚಿಸಿದ್ದಾರೆ. ಅದರಂತೆ ಕೊಡಗು ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಜಿಲ್ಲೆಯ ಹಲವು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬೆಂಗಳೂರಿಗೆ ಅಥವಾ ಜಿಲ್ಲಾ ಕೇಂದ್ರಕ್ಕೂ ತೆರಳಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಪ್ರತೀ ತಿಂಗಳು ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ ಹಮ್ಮಿಕೊಳ್ಳಲಾಗುತ್ತದೆ. ಈ ಅವಕಾಶವನ್ನು ಬಳಸಿಕೊಂಡು ಕಾಲಮಿತಿಯೊಳಗೆ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳುವಂತಾಗಬೇಕು ಎಂದರು.
ಪ್ರತೀ ತಿಂಗಳು ಜಿಲ್ಲಾಡಳಿತ ನೇತೃತ್ವದಲ್ಲಿ ಜನತಾ ದರ್ಶನ ನಡೆಯಲಿದ್ದು, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು. ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.
ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ, ಸರ್ಕಾರ ನುಡಿದಂತೆ ನಡೆಯುತ್ತಿದೆ. 100 ದಿನದಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಬಡವರ, ಶೋಷಿತರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಲಾಗಿದೆ. ಆ ನಿಟ್ಟಿನಲ್ಲಿ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತೀ ತಿಂಗಳು ತಾಲ್ಲೂಕು ಮಟ್ಟದಲ್ಲಿ ಜನತಾ ದರ್ಶನ ನಡೆಯಲಿದ್ದು, ಗ್ರಾಮ ಮಟ್ಟದಲ್ಲಿಯ ಸಮಸ್ಯೆಗಳನ್ನು ಜನತಾ ದರ್ಶನದ ಮೂಲಕ ಪರಿಹರಿಸಕೊಳ್ಳಬಹುದಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಅವರು ಮಾತನಾಡಿ ಜಿಲ್ಲೆಯಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಭೂಮಿ ಒದಗಿಸುವುದು, ಕಾಡಾನೆ ಹಾವಳಿ ನಿಯಂತ್ರಣ ಮಾಡುವುದು, ಕಾವೇರಿ ನದಿ ಪಾತ್ರದಲ್ಲಿ ತ್ಯಾಜ್ಯ ವಿಲೇವಾರಿ ಸಂಬಂಧ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸರ್ಕಾರದ ಹಂತದಲ್ಲಿ ಪರಿಹರಿಸುವಲ್ಲಿ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಶಾಸಕರಾದ ಡಾ.ಮಂತರ್ ಗೌಡ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ತಹಶೀಲ್ದಾರರು, ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.