ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ,ಸೆ.25: ಸಾಮೂಹಿಕ ಪ್ರಯತ್ನ ಮತ್ತು ಇಚ್ಚಾಶಕ್ತಿಯಿಂದ ಮಾತ್ರ ಸಹಕಾರಿ ಕ್ಷೇತ್ರದ ಅಭಿವೃಧ್ಧಿ ಮತ್ತು ರೈತರ ಪ್ರಗತಿ ಆಗಲಿದೆ ಎಂದು ಶಾಸಕ ಮೇಲೂರು ರವಿಕುಮಾರ್ ಹೇಳಿದರು.
ನಗರದ ಭೂ ಅಭಿವೃಧ್ಧಿ ಬ್ಯಾಂಕಿನ ಆವರಣದಲ್ಲಿ ನಡೆದ ಬ್ಯಾಂಕ್ನ 85ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಾಲ ವಸೂಲಾತಿ ಪ್ರಮಾಣ ಕುಸಿದ ಕಾರಣಕ್ಕೆ ಇಲ್ಲಿ ರೈತರಿಗೆ ಸಾಲ ವಿತರಣೆ ಇನ್ನಿತರೆ ಸವಲತ್ತುಗಳು ಸಿಗದಂತಾಗಿದೆ. ಸಹಕಾರಿ ಕ್ಷೇತ್ರದ ಹಿರಿಯ ನಾಯಕರು ಈ ಬ್ಯಾಂಕಿನ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಹೆಚ್ಚು ಆಸಕ್ತಿವಹಿಸಬೇಕಿದೆ ಎಂದರು.
ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಎ.ನಾಗರಾಜ್ ಮಾತನಾಡಿ, ಸಾಕಷ್ಟು ರೈತರು ಸಾಲ ಪಡೆಯುವಾಗ ತೋರುವ ಆಸಕ್ತಿಯನ್ನು ಮತ್ತೆ ಸಾಲ ತೀರಿಸುವ ಬಗ್ಗೆ ತೋರುತ್ತಿಲ್ಲ. ಹಾಗಾಗಿ ಸಾಲ ವಸೂಲಾತಿ ಪ್ರಮಾಣ ಕುಸಿದಿದೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಸಾಕಷ್ಟು ರೈತರು ಆರ್ಥಿಕವಾಗಿ ಬಲಾಢ್ಯರಾಗಿದ್ದರೂ ಮುಂದೊಂದು ದಿನ ಯಾವುದಾದರೂ ಸರಕಾರ ಬಂದು ಸಾಲ ಮನ್ನಾ ಮಾಡುತ್ತದೆ ಎನ್ನುವ ಭಾವನೆಯಿಂದ ಸಾಲ ತೀರಿಸದೆ ಸತಾಯಿಸುತ್ತಿದ್ದು ಈ ಭಾವನೆ ಹೋದರೆ ಮಾತ್ರ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗುತ್ತದೆ ಮತ್ತು ಇನ್ನಷ್ಟು ರೈತರಿಗೆ ಸಾಲ ಸೌಲಭ್ಯ ಸಿಗುತ್ತದೆ ಎಂದು ಹೇಳಿದರು.
ಬ್ಯಾಂಕ್ನ ನಿರ್ದೇಶಕ ಮಾದೇನಹಳ್ಳಿ ರವಿ ಮಾತನಾಡಿ, ಬ್ಯಾಂಕ್ನ ಸಾಲ ವಸೂಲಾತಿ ಪ್ರಮಾಣ ಕುಸಿದ ಕಾರಣ ಕಳೆದ ವರ್ಷ ನಾವು ಯಾವ ರೈತರಿಗೂ ಸಾಲ ನೀಡಲು ಸಾಧ್ಯವಾಗಲಿಲ್ಲ. ಆದರೆ ಎಲ್ಲ ನಿರ್ದೇಶಕರೂ ಸಹ ಗಟ್ಟಿ ತೀರ್ಮಾನ ತೆಗೆದುಕೊಂಡ ಕಾರಣ ಇದೀಗ ಒಟ್ಟು 6 ಕೋಟಿಯಷ್ಟು ಸಾಲ ವಸೂಲಿ ಆಗುವ ಮೂಲಕ ಸಾಲ ವಸೂಲಾತಿ ಪ್ರಮಾಣ ಶೇ 38ಕ್ಕೆ ಹೆಚ್ಚಿದೆ. ಹಾಗಾಗಿ ಈ ವರ್ಷ ರೈತರಿಗೆ ಸಾಲ ನೀಡಲಾಗುವುದು ಎಂದು ಬ್ಯಾಂಕ್ನ ಆರ್ಥಿಕ ಸ್ಥಿತಿಗತಿ ಬಗ್ಗೆ ವರದಿ ನೀಡಿದರು.
ಬ್ಯಾಂಕಿನ ವಾರ್ಷಿಕ ವರದಿಯನ್ನು ಮಂಡಿಸಲಾಯಿತು. ಬ್ಯಾಂಕ್ನ ಅಧ್ಯಕ್ಷ ಸಿ.ಕೆ.ನಾರಾಯಣಸ್ವಾಮಿ ಅಧ್ಯಕ್ಷತೆವಹಿಸಿದ್ದರು. ಕಾಳನಾಯಕನಹಳ್ಳಿ ಭಿಮೇಶ್, ಬಂಕ್ ಮುನಿಯಪ್ಪ, ದೊಗರನಾಯಕನಹಳ್ಳಿ ವೆಂಕಟೇಶ್, ಡಿ.ಸಿ.ರಾಮಚಂದ್ರ, ಮುರಳಿ, ಸುನಂದಮ್ಮ, ಬ್ಯಾಂಕ್ನ ವ್ಯವಸ್ಥಾಪಕ ಕೃಷ್ಣನ್ ಸೇರಿದಂತೆ ಎಲ್ಲ ನಿರ್ದೇಶಕರು, ಷೇರುದಾರರು, ಸಿಬ್ಬಂದಿ ಉಪಸ್ಥಿತರಿದ್ದರು.