ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.27: ಮುಂಬರುವ ಈಶಾನ್ಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಗೆ ನಾನು ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಎಂದು ಹೊಸಪೇಟೆಯ ಕೆ.ಬಿ. ಶ್ರೀನಿವಾಸ ಹೇಳಿದರು.
ಬುಧವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿದ ಅವರು ಹಿಂದಿನ ಸಲದ ಇದೇ ಚುನಾವಣೆಯಲ್ಲಿ ನಾನು ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ್ ವಿರುದ್ದ ಕೇವಲ 321 ಮತಗಳಿಂದ ಸೋತಿದ್ದು ಈ ಸಲ ನನಗೆ ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಗೆಲ್ಲುವುದು ಖಚಿತ ಎಂದರು.
ಬಳ್ಳಾರಿಯಲ್ಲಿ ಹುಟ್ಟಿ ಬೆಳೆದ ನಾನು 1984-85 ರಲ್ಲಿ ಬಿ.ಇ ಪದವೀಧರನಾಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಟೆಕ್ ಪರೀಕ್ಷೆ ಬಂಗಾರದ ಪದಕದೊಂದಿಗೆ ಪಾಸಾಗಿದ್ದೇನೆ. ಬಳ್ಳಾರಿಯ ವೀರಶೈವ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ವ್ಯಾಪಾರ , ರಾಜಕೀಯದಲ್ಲಿ ತೊಡಗಿದ್ದೇನೆ.
ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸಲು ಕಾಂಗ್ರೆಸ್ ನಿಂದ 7-8 ಆಕಾಂಕ್ಷಿಗಳಿದ್ದಾರೆ. ಪಕ್ಷ ಬೇರೆ ಯಾರಿಗೆ ಟಿಕೆಟ್ ಕೊಟ್ಟರೂ ಬೆಂಬಲಿಸುವೆ ಆದರೆ ನನಗೆ ಟಿಕೆಟ್ ಕೊಟ್ಟರೆ ಗೆಲುವಿನ ಸಾಧ್ಯತೆ ಹೆಚ್ಚಿದೆ ಎಂದು ಕೆ.ಬಿ. ಶ್ರೀನಿವಾಸ ಹೇಳಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್, ಮುಖಂಡರಾದ ಪ್ರಸನ್ನ ಗಡಾದ, ಶಿವರೆಡ್ಡಿ ಭೂಮಕ್ಕನವರ, ಶಿವಕುಮಾರ ಪಾವಲಿ ಶೆಟ್ಟರ್, ಹೊಸಪೇಟೆಯ ವೀರಾಂಜನೇಯ ಉಪಸ್ಥಿತರಿದ್ದರು.