ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ,ಸೆ.27:ಸರ್ಕಾರದ ವಿವಿಧ ಯೋಜನೆಗಳು ಮತ್ತು ಧ್ಯೇಯೋದ್ದೇಶಗಳು ಸಫಲವಾಗಬೇಕಾದರೆ ಅಧಿಕಾರಿಗಳ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ಜವಾಬ್ದಾರಿ ಸಾರ್ವಜನಿಕರ ಮೇಲೆಯೂ ಇದೆ, ಪ್ರಮುಖವಾಗಿ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂದು ಲೋಕಾಯುಕ್ತ ಡಿವೈಎಸ್ಪಿ ವೀರೇಂದ್ರಕುಮಾರ್ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತರಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಕುಂದುಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸುವ ಸಭೆಯಲ್ಲಿ ಮಾತನಾಡಿದರು.
ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಕೆಲಸಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಸಾರ್ವಜನಿಕರು ಪ್ರಶ್ನೆ ಮಾಡುವುದನ್ನು ರೂಡಿಸಿಕೊಳ್ಳಬೇಕು. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಅಧಿಕಾರಿಗಳು ವಿಳಂಬ, ನಿರ್ಲಕ್ಷ್ಯ, ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಅಕ್ರಮ ನಡೆಸಿ ಹಣ ದುರುಪಯೋಗ ಸೇರಿದಂತೆ ಲಂಚದ ಬೇಡಿಕೆಯಿಟ್ಟರೆ ಸಾರ್ವಜನಿಕರು ನಿರ್ದಿಷ್ಟ ಮಾಹಿತಿ, ಹಾಗು ಅಗತ್ಯ ದಾಖಲೆಗಳೊಂದಿಗೆ ಲೋಕಾಯುಕ್ತ ಕಚೇರಿಗೆ ನೇರವಾಗಿ ಅಥವ ಅಂಚೆ ಮೂಲಕ ದೂರು ಸಲ್ಲಿಸಬಹುದು ಎಂದರು.
ಯಾವುದೇ ಕೆಲಸವಾದರೂ ಸಹಿ ಮಧ್ಯವರ್ತಿಗಳ ಮೂಲಕ ಹೋಗುವ ಬದಲಿಗೆ ನೇರವಾಗಿ ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿ ಮಾಡುವ ಮನಸ್ಥಿತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಆರ್ಟಿ ಪಿಆರ್, ಅಬಕಾರಿ, ಶಿಕ್ಷಣ, ಎಸಿ ಕಚೇರಿ ಹಾಗು ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ಅರ್ಜಿದಾರರಿಂದ ಒಟ್ಟು 14 ಅರ್ಜಿಗಳನ್ನು ಸ್ವೀಕರಿಸಲಾಯಿತು.