ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ.29: ಅರಣ್ಯ ಪ್ರದೇಶ ಕ್ಷೀಣಿಸಿದರೆ ಮಳೆ ಪ್ರಮಾಣವೂ ಕ್ಷೀಣಿಸುತ್ತದೆ. ಈ ಬಾರಿ ಮಳೆಯ ಕೊರತೆಯಿಂದ 1 ಕೋಟಿ ಎಕರೆ ಭೂಮಿಯಲ್ಲಿನ ಬೆಳೆ ಹಾನಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿಂದು ಅರಣ್ಯ ಇಲಾಖೆಯಲ್ಲಿ ಶೌರ್ಯ ಮತ್ತು ಧೈರ್ಯದಿಂದ ಸೇವೆ ಸಲ್ಲಿಸಿ, ಅರಣ್ಯ, ವನ್ಯಜೀವಿ ಸಂರಕ್ಷಣೆ ಮಾಡಿದ 50 ಅಧಿಕಾರಿ ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ ಮಾಡಿ ಮಾತನಾಡಿದ ಅವರು, ಭೌಗೋಳಿಕ ಪ್ರದೇಶದ ಶೇ.33ರಷ್ಟು ಹಸಿರು ಹೊದಿಕೆ ಇದ್ದರೆ ಮಳೆ, ಬೆಳೆ ಚೆನ್ನಾಗಿ ಆಗುತ್ತದೆ. ಹೀಗಾಗಿ ಅರಣ್ಯ ಸಂರಕ್ಷಣೆ ಇಂದಿನ ಅಗತ್ಯವಾಗಿದೆ ಎಂದರು.
ಮಳೆ ಕಡಿಮೆಯಾದರೆ, ಬೆಳೆ ಉತ್ಪಾದನೆ ಕಡಿಮೆಯಾಗುತ್ತದೆ, ಆಗ ರಾಜ್ಯದ ಆದಾಯ ಕ್ಷೀಣಿಸುತ್ತದೆ. ಇದರಿಂದ ತಲಾದಾಯವೂ ಕುಗ್ಗುತ್ತದೆ. ಹೀಗಾಗಿ ಅರಣ್ಯ ಸಂರಕ್ಷಣೆ ಎಲ್ಲರ ಹೊಣೆ ಎಂದು ಪ್ರತಿಪಾದಿಸಿದರು.
ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ನಾವು ರಾಜ್ಯ ಆನೆಗಳ ಸಂಖ್ಯೆಯಲ್ಲಿ ನಂ.1 ಇದ್ದೇವೆ, ಹುಲಿಗಳ ಸಂಖ್ಯೆಯಲ್ಲಿ ನಂ.2 ಇದ್ದೇವೆ. ಇದು ಹೆಮ್ಮೆಯ ವಿಚಾರ. ಅದಕ್ಕೆ ತಕ್ಕಂತೆ ಅರಣ್ಯವೂ ಹೆಚ್ಚಬೇಕು. ವನ್ಯಜೀವಿ – ಮಾನವ ಸಂಘರ್ಷ ನಿಯಂತ್ರಿಸಬೇಕು ಎಂದು ಕಿವಿಮಾತು ಹೇಳಿದರು.
ವನ್ಯಜೀವಿಗಳಿಗೆ ಅರಣ್ಯದಲ್ಲಿ ಸಾಕಷ್ಟು ಮೇವು, ಆಹಾರ ಮತ್ತು ನೀರು ಲಭ್ಯವಾದರೆ ಅವು ಕಾಡಿನಿಂದ ನಾಡಿಗೆ ಬರುವುದು ತಪ್ಪುತ್ತದೆ. ಹೀಗಾಗಿ ಅರಣ್ಯಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ತಿಳಿಸಿದರು.
ಮುಂಚೂಣಿಯಲ್ಲಿ ರಾಜ್ಯ: ಖಂಡ್ರೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ, ಇದಕ್ಕೆ ಆನೆ ಮತ್ತು ಹುಲಿ ಸಂಖ್ಯೆಯಲ್ಲಿ ರಾಜ್ಯ ಅಗ್ರ ಎರಡು ಸ್ಥಾನದಲ್ಲಿರುವುದು ಸಾಕ್ಷಿ. ಕರ್ನಾಟಕ ರಾಜ್ಯ ಸಮೃದ್ಧ ಅರಣ್ಯ ಹಾಗೂ ವನ್ಯಜೀವಿ ಸಂಪತ್ತನ್ನು ಹೊಂದಿದ್ದು ಸಸ್ಯಶ್ಯಾಮಲೆಯಾಗಿದೆ ಎಂದರು.
ನಮ್ಮ ರಾಜ್ಯದಲ್ಲಿ 6 ಸಾವಿರದ 395 ಆನೆಗಳಿವೆ ಅದೇ ರೀತಿ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ ರಾಜ್ಯದಲ್ಲಿ ಸುಮಾರು 560 ಹುಲಿಗಳಿವೆ. ಅಳಿವಿನಂಚಿನಲ್ಲಿರುವ ಹುಲಿಗಳನ್ನು ಸಂರಕ್ಷಿಸಲು ಅಂದಿನ ಪ್ರಧಾನಿ ಇಂದಿರಾಗಾಂಧೀ ಅವರು 1973ರಲ್ಲಿ ಆರಂಭಿಸಿದ ಹುಲಿ ಯೋಜನೆಗೆ 50 ವರ್ಷ ತುಂಬಿರುವುದೂ ಮತ್ತೊಂದು ಸಂತೋಷದಾಯಕ ವಿಚಾರವಾಗಿದೆ. 1980ರಲ್ಲಿ ದೇಶದಲ್ಲಿ ಕೇವಲ 1,827ರಷ್ಟಿದ್ದ ಹುಲಿಗಳ ಸಂಖ್ಯೆ ಈಗ 3ಸಾವಿರ ದಾಟಿದೆ. ಅರಣ್ಯ, ವನ್ಯಜೀವಿಗಳ ಸಂರಕ್ಷಣೆಯಲ್ಲಿ ಇಂದಿರಾಜೀ ಅವರು ತಂದ ಕಾಯಿದೆ ಪರಿಣಾಮಕಾರಿಯಾಗಿ ಎಂದು ಹೇಳಿದರು.
ಅರಣ್ಯ ವರ್ಧನೆಗೆ ಒತ್ತು:
ತಾವು ಅರಣ್ಯ ಸಚಿವನಾದ ತರುವಾಯ 4 ಸಾವಿರ ಎಕರೆ ಭೂಮಿಯನ್ನು ಅರಣ್ಯ ಪ್ರದೇಶ ಎಂದು ಘೋಷಿಸಲಾಗಿದ್ದು, ರಾಜ್ಯದ ಅರಣ್ಯಕ್ಕೆ 4 ಸಾವಿರ ಎಕರೆ ಸೇರ್ಪಡೆಯಾಗಿದೆ ಎಂದರು. ಈ ವರ್ಷ 5 ಕೋಟಿ ಸಸಿ ನೆಟ್ಟು, ಜಿಯೋ ಟ್ಯಾಗ್ ಮಾಡಿ, ಅವುಗಳಲ್ಲಿ ಎಷ್ಟು ಸಸಿ ಉಳಿದಿವೆ ಎಂದು ತಿಳಿಯಲು ಮೂರನೇ ವ್ಯಕ್ತಿಯಿಂದ ಆಡಿಟ್ ಕೂಡ ಮಾಡಲು ಸೂಚಿಸಲಾಗಿದೆ. ಈವರೆಗೆ ಅಂದರೆ ಜುಲೈ 1ರಿಂದ ಆರಂಭವಾದ ವನಮಹೋತ್ಸವದಿಂದ ಇಲ್ಲಿಯವರೆಗೆ 3 ತಿಂಗಳಲ್ಲಿ ಸುಮಾರು 4 ಕೋಟಿ 75 ಲಕ್ಷ ಸಸಿ ನೆಡಲಾಗಿದೆ ಎಂದು ವಿವರಿಸಿದರು.
ಬೆಂಗಳೂರು ನಗರವು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಭಾರತದ ಗಾರ್ಡನ್ ಸಿಟಿ ಎನ್ನುವ ಹೆಗ್ಗಳಿಕೆಯನ್ನು ಹೊಂದಿತ್ತು. ಭಾರತೀಯ ಅರಣ್ಯ ಸಮೀಕ್ಷಾ ವರದಿಯಂತೆ ಬೆಂಗಳೂರು ನಗರವು ಭಾರತದಲ್ಲಿ ಮೂರನೇ ಅತಿ ಹೆಚ್ಚು ಭೂ ಪ್ರದೇಶವನ್ನು ಹೊಂದಿರುವ ನಗರವಾಗಿದ್ದು, ಸುಮಾರು 89 ಚದರ ಕಿಲೋಮೀಟರ್ನಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ಬೆಂಗಳೂರಿನ ವೃಕ್ಷ ಹೊದಿಗೆ ಶೇ.6.81 ರಷ್ಟಿದೆ. ಕಳವಳಕಾರಿಯಾದ ಸಂಗತಿ ಎಂದರೆ ಕಳೆದ 1೦ ವರ್ಷಗಳಲ್ಲಿ ಬೆಂಗಳೂರು ನಗರವು 5 ಚದುರ ಕಿಲೋಮೀಟರ್ನಷ್ಟು ಹಸಿರು ಹೊದಿಕೆಯನ್ನ ಕಡಿಮೆಯಾಗಿದೆ ಎಂದರು.
ಅರಣ್ಯ ಸಿಬ್ಬಂದಿಯ ಆದ್ಯ ಕರ್ತವ್ಯವೇ ಅರಣ್ಯ ರಕ್ಷಣೆ. ನೀವು ಆ ಕಾರ್ಯವನ್ನು ಶ್ರದ್ಧೆಯಿಂದ ಮಾಡಿದರೆ, ವನ, ವನ್ಯಮೃಗ ರಕ್ಷಿಸಲು ಪಣ ತೊಡುವಂತೆ ತಿಳಿಸಿದರು. ಸಚಿವರಾದ ಪ್ರಿಯಾಂಕ್ ಖರ್ಗೆ, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಅರಣ್ಯ ಪಡೆ ಮುಖ್ಯಸ್ಥರಾದ ರಾಜೀವ್ ರಂಜನ್ ಮತ್ತಿತರರು ಪಾಲ್ಗೊಂಡಿದ್ದರು.