ಸುದ್ದಿಮೂಲ ವಾರ್ತೆ
ಆನೇಕಲ್, ಸೆ. 29 : ಬೆಂಗಳೂರಿನ ಗಡಿ ಪ್ರದೇಶ ಆನೇಕಲ್ ನಲ್ಲೂ ಸಹ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ನಗರದೆಲ್ಲೆಡೆ ಅಂಗಡಿ ಮುಂಗಟ್ಟುಗಳು ಮುಚ್ಚಲಾಗಿತ್ತು. ಮೊದಲಿಗೆ ಆನೇಕಲ್ ಸೋಲೂರು ಗಡಿಯಲ್ಲಿ ಕರವೇ ಶಿವರಾಮೇಗೌಡರ ಬಣದ ವತಿಯಿಂದ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆಯನ್ನು ನಡೆಸಲಾಯಿತು.
ಅತ್ತಿಬೆಲೆ ಗಡಿ ಗೋಪುರದ ಬಳಿ ಮೊದಲು ಜಯ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ರಸ್ತೆ ತಡೆಗೆ ಮುಂದಾಗಿ ಪ್ರತಿಭಟಿಸಿದರು. ಇದೇ ಸಮಯದಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಕನ್ನಡ ಜಾಗೃತಿ ವೇದಿಕೆ ಮಂಜುನಾಥ ದೇವ ನೇತೃತ್ವದಲ್ಲಿ ರ್ಯಾಲಿ ನಡೆಸಿ ಗಡಿಗೆ ಮುತ್ತಿಗೆ ಹಾಕಿದರು. ಈ ಸಮಯದಲ್ಲಿ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಂತೆ ಎಚ್ಚರಿಕೆ ವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ್ ದೇವ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಛೀಮಾರಿಯನ್ನು ಹಾಕಿ, ಕಾವೇರಿ ನೀರನ್ನು ಬಿಡುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆಯನ್ನು ನಡೆಸುವುದಾಗಿ ಎಚ್ಚರಿಸಿದರು.
ಕನ್ನಡಪರ ಸಂಘಟನೆಗಳು ಸಹ ಸೇರಿ ಅತ್ತಿಬೆಲೆ ಗಡಿಗೆ ಮುತ್ತಿಗೆಯನ್ನು ಹಾಕಿದ್ದರು. ಪ್ರತಿಭಟನಾಕಾರರ ಜೊತೆಗೆ ಪುಟಾಣಿ ಮಕ್ಕಳು ಸಹ ಕಾವೇರಿ ನಮ್ಮದು ಎನ್ನುವ ಘೋಷಣೆಯನ್ನು ಕೂಗಿ ಕರ್ನಾಟಕದ ಬಾವುಟವನ್ನು ಹಿಡಿದು ಕಾವೇರಿ ಪರ ಧ್ವನಿ ಎತ್ತಿದ ದೃಶ್ಯ ಕಂಡುಬಂದಿತು.
ಸುಮಾರು 300ಕ್ಕೂ ಹೆಚ್ಚು ಮಂದಿ ಕನ್ನಡಪರ ಹೋರಾಟಗಾರರು ಹೆದ್ದಾರಿಯನ್ನು ಸಂಪೂರ್ಣವಾಗಿ ಮುತ್ತಿಗೆ ಹಾಕಿ ತಡೆಹಿಡಿದರು.ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನೆಕಾರರಿಗೂ ಮಾತಿನ ಚಕಮಕಿ ನಡೆದು ಪ್ರತಿಭಟನಾಕಾರರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದರು.
ತಮಿಳುನಾಡು ನೀರನ್ನು ಯಾವ ರೀತಿ ಉಪಯೋಗಿಸುತ್ತಿದೆ ಎಂಬುದರ ಬಗ್ಗೆ ಅಣುಕು ಪ್ರದರ್ಶನವನ್ನು ಸಹ ಪ್ರತಿಭಟನಾಕಾರರು ಮಾಡಿ ಸರ್ಕಾರದ ಗಮನವನ್ನು ಸೆಳೆದಿದ್ದಾರೆ.