ಸುದ್ದಿಮೂಲ ವಾರ್ತೆ
ಬೆಂಗಳೂರು ಸೆ.30: ರಾಜ್ಯದಲ್ಲಿ ವಿಜ್ಞಾನದ ಬಗ್ಗೆ ಜನರಲ್ಲಿ ಜಾಗೃತಿ ಹಾಗೂ ಖಗೋಳಶಾಸ್ತ್ರದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಪ್ರಮುಖ ಸಂಸ್ಥೆಯಾಗಿರುವ ಜವಾಹರ್ಲಾಲ್ ನೆಹರು ತಾರಾಲಯದಲ್ಲಿ ನಿರ್ಮಿಸಲಾಗುತ್ತಿರುವ ಅತ್ಯಾಧುನಿಕ ತಂತ್ರಜ್ಞಾನದ ಆಡಿಟೋರಿಯಂ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಸೂಚನೆ ನೀಡಿದರು.
ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಈ ಕಾಮಗಾರಿಯನ್ನ ಡಿಸೆಂಬರ್ 2021 ರ ಒಳಗಾಗಿ ಪೂರ್ಣಗೊಳಿಸಬೇಕಾಗಿತ್ತು. ಈಗಾಗಲೇ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದು ಅಂತಿಮ ಹಂತದ ಕಾಮಗಾರಿಗಳು ಬಾಕಿಯಿವೆ. ಈ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಬೆಂಗಳೂರು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಸುಶೀಲಮ್ಮ ನೆಹರು ತಾರಾಲಯದ ನಿರ್ದೇಶಕರು ಸೇರಿದಂತೆ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಉಪಸ್ಥಿತರಿದ್ದರು.