ಸುದ್ದಿಮೂಲ ವಾರ್ತೆ
ಕೆ.ಆರ್.ಪುರ.ಸೆ.30:ಮಹದೇವಪುರ ಕ್ಷೇತ್ರದ ಹಿರಂಡಹಳ್ಳಿಯಲ್ಲಿ ಹಸುಗಳ ಕಾಲುಬಾಯಿ ಜ್ವರದ ವಿರುದ್ಧ ಲಸಿಕಾ ಅಭಿಯಾನಕ್ಕೆ ಶಾಸಕಿ ಮಂಜುಳಾ ಲಿಂಬಾವಳಿ ಅವರು ಹಸುಗಳಿಗೆ ಫಲ ತಿನ್ನಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕಾಲುಬಾಯಿ ರೋಗವು ಎತ್ತು, ಹೋರಿ, ಹಸು, ಎಮ್ಮೆ ಮತ್ತು ಹಂದಿಗಳಲ್ಲಿ ಕಾಣಿಸಿಕೊಳ್ಳುವ ಮಾರಕ ರೋಗವಾಗಿದೆ ಮತ್ತು ಇದರಿಂದ ಆರ್ಥಿಕತೆಗೆ ನಷ್ಟ ಉಂಟಾಗುತ್ತದೆ. ರೋಗದಿಂದ ಗುಣಮುಖವಾದ ಜಾನುವಾರುಗಳಲ್ಲಿ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಸಾಮರ್ಥ್ಯ ನಷ್ಟ ಮತ್ತು ಹಾಲಿನ ಇಳುವರಿಯಲ್ಲಿ ಇಳಿಮುಖವಾಗುವ ಸಾಧ್ಯತೆ ಇರುತ್ತದೆ ಎಂದರು.
ರೋಗದಿಂದ ಪೂರ್ಣ ಸುರಕ್ಷತೆಗಾಗಿ ಮೂರು ತಿಂಗಳು ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ಈ ಲಸಿಕೆ ಹಾಕಿಸುವುದು ಅತ್ಯಗತ್ಯವಾಗಿರುತ್ತದೆ. ರೈತರು ಹಾಗೂ ಪಶು ಪಾಲಕರು ತಪ್ಪದೇ ತಮ್ಮ ಜಾನುವಾರುಗಳಿಗೆ ಈ ಲಸಿಕೆಯನ್ನು ಹಾಕಿಸಿ, ರೋಗ ಬರದಂತೆ ಅವುಗಳನ್ನು ಸಂರಕ್ಷಿಸಿಕೊಳ್ಳಬೇಕು ಮತ್ತು ರಾಜ್ಯವನ್ನು ಕಾಲುಬಾಯಿ ರೋಗ ಮುಕ್ತ ವಲಯವನ್ನಾಗಿಸಲು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬೆಂಗಳೂರು ಸಹಕಾರಿ ಹಾಲು ಒಕ್ಕೂಟ ನಿಗಮದ ಉಪಾಧ್ಯಕ್ಷರಾದ ಮಂಜುನಾಥ್, ಹಿರಂಡಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ನಾಗರಾಜ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು, ರೈತರು, ಗ್ರಾಮಸ್ಥರು ಉಪಸ್ಥಿತರಿದ್ದರು.