ಸುದ್ದಿಮೂಲ ವಾರ್ತೆ
ಕೆ.ಆರ್.ಪುರ.ಅ.1:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದಂತೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಮಹದೇವಪುರ ವಿಧಾನಸಭಾ ಕ್ಷೇತ್ರದ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ “ಒಂದು ಗಂಟೆ ಸ್ವಚ್ಛತೆಗಾಗಿ ಶ್ರಮದಾನ” ಕಾರ್ಯಕ್ರಮಕ್ಕೆ ಶಾಸಕಿ ಮಂಜುಳಾ ಲಿಂಬಾವಳಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು
ರಾಷ್ಟ್ರಪಿತ ಮಹಾತ್ಮಗಾಂಧಿಯವರ 154 ನೇ ಜಯಂತಿಯ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕಿ ಬಾತ್’ ನ 105 ನೇ ಸಂಚಿಕೆಯಲ್ಲಿ, ಅಕ್ಟೋಬರ್ 1 ರಂದು ಬೆಳಿಗ್ಗೆ 10 ಗಂಟೆಗೆ ಎಲ್ಲಾ ನಾಗರಿಕರು ಒಟ್ಟಾಗಿ “ಸ್ವಚ್ಛತೆಗಾಗಿ ಒಂದು ಗಂಟೆ ಶ್ರಮದಾನ” ಗಾಗಿ ಮನವಿ ಮಾಡಿದ್ದಿದ್ದರಿಂದ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ರಾಷ್ಟ್ರವ್ಯಾಪಿ ಈ ಕಾರ್ಯಕ್ರಮ ನಡೆಯಲಿದೆ. ಸ್ವಚ್ಛ, ನೈರ್ಮಲ್ಯ ಮತ್ತು ಸುತ್ತಮುತ್ತಲಿನ ಸ್ವಚ್ಛತೆ ಮತ್ತು ಹಸಿರನ್ನು ಕಾಪಾಡಿಕೊಳ್ಳುವ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಮಹದೇವಪುರ ಕ್ಷೇತ್ರದ್ಯಾಂತ ಎಲ್ಲಾ ವಾರ್ಡ್ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛ ಅಭಿಯಾನ ಕಾರ್ಯಕ್ರಮ ನಡೆಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹದೇವಪುರ ಜಂಟಿ ಆಯುಕ್ತರಾದ ದಾಕ್ಷಯಿನಿ, ಎಸಿಪಿ ಪ್ರಿಯಾ, ಸರ್ಕಲ್ ಇನ್ಸ್ಪೆಕ್ಟರ್ ಅನಿಲ್ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು, ಮುಖಂಡರು ಇದ್ದರು.