ಸುದ್ದಿಮೂಲವಾರ್ತೆ
ಕೊಪ್ಪಳ,ಅ.1:ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬ ನಾಗರೀಕ ಸ್ವಚ್ಛತೆಯನ್ನು ಮೈಗೂಡಿಸಿಕೊಳ್ಳಬೇಕು. ಜಲಮೂಲಗಳ ಹತ್ತಿರ ಯಾವುದೇ ರೀತಿಯ ಕಸವನ್ನು ಎಸೆಯಬಾರದೆಂದು ಹೊಸಳ್ಳಿ ಐಆರ್ ಬಿ ಕಮಾಂಡೆಂಟ್ ಡಾ.ಮಹದೇವ ಪ್ರಸಾದ ಕರೆ ನೀಡಿದರು.
ಇಂದು ಕೊಪ್ಪಳ ತಾಲೂಕಿನ ಮುನಿರಾಬಾದ ಡ್ಯಾಂ ತುಂಗಭದ್ರಾ ಹಿನ್ನಿರಿನ ಪ್ರದೇಶದಲ್ಲಿ ತಾಲೂಕ ಪಂಚಾಯತ ಹಾಗು ಹೊಸಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಏರ್ಪಡಿಸಿದ್ದ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಮಾತನಾಡಿ ಸಪ್ಟಂಬರ್-15 ರಿಂದ ಅಕ್ಟೋಬರ್-02ರವರಗೆ ಜರುಗುವ ಸ್ವಚ್ಛತಾ ಹಿ ಸೇವೆ ಕಾರ್ಯಕ್ರಮ ಪ್ರಯುಕ್ತ ಇಂದು ದೇಶದಾದ್ಯಂತ ಜಲ ಮೂಲಗಳಲ್ಲಿ ಶ್ರಮದಾನ ಕಾರ್ಯಕ್ರಮ ಜರುಗಿಸಲು ನಿರ್ದೇಶನ ಬಂದಿರುವದರಿಂದ ತುಂಗಭದ್ರಾ ಹಿನೀರಿನ ಪ್ರದೇಶವಾದ ಮುನಿರಾಬಾದ ಡ್ಯಾಂ ಲೆಕ್ಯೂನಲ್ಲಿ ಶ್ರಮದಾನ ಕಾರ್ಯಕ್ರಮ ಜರುಗಿಸಲಾಗಿದೆ. ಇದರಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಅಂದಾಗ ಮಾತ್ರ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಪ್ರವಾಸಿ ತಾಣಗಳಲ್ಲಿ ನಾವು ಕಸವನ್ನು ಎಸೆಯುವದರಿಂದ ಕಸದ ಆಗರಗಳಾಗುವದರಲ್ಲಿ ಸಂದೇಹವಿಲ್ಲ. ಆ ಕಾರಣಕ್ಕಾಗಿ ಇವತ್ತಿನ ಶ್ರಮದಾನದಲ್ಲಿ ಎಲ್ಲರೂ ಮುಕ್ತವಾಗಿ ಭಾಗವಹಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು. ಪ್ರತಿ ದಿನ, ಪ್ರತಿ ಕ್ಷಣ ನಾವುಗಳು ಸ್ವಚ್ಛತೆಗಾಗಿ ಸಮಯ ಮೀಸಲಿಡುವದು ಅನಿವಾರ್ಯವೆಂದರು.
ತೋಟಗಾರಿಕೆ ಮಹಾವಿದ್ಯಾಲಯದ ಡಿನ್ ತಮ್ಮಯ್ಯ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಟಿ.ಜನಾರ್ಧನ ಹುಲಿಗಿ ಸ್ವಚ್ಛತೆಯ ಕುರಿತು ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಪಂಚಾಯತ ಅಭಿವೃದ್ದಿ ಅಧಿಕಾರಿ ವಿರೇಶ್ ಜಿ.ಎ ನಿರ್ವಹಿಸಿದರು.
ಗಮನ ಸೆಳೆದ ಕಸ ಸಂಗ್ರಹಣೆ:- ತುಂಗಭದ್ರಾ ಡ್ಯಾಂ ಹಿನ್ನೀರಿನ ಹತ್ತಿರ ಬಿದ್ದಿರುವ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್, ಅರಿವೆ, ಪೇಪರಗಳು, ಚಹಾ, ಟೀ ಕಪ್ ಗಳನ್ನು ಶ್ರಮದಾನದ ಮೂಲಕ ಎಲ್ಲರೂ ಆಯ್ದುಕೊಂಡು ಕಸ ಸಂಗ್ರಹಣಾ ವಾಹನಕ್ಕೆ ನೀಡಿದರು. ಐಆರ್ ಬಿ ಪೋಲಿಸ್ ಅಧಿಕಾರಿಗಳು, ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ನಿರ್ದೇಶಕರು, ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು, ಪಿಡಿಒ, ಐಆರ್ ಬಿ ಮತ್ತು ಕೆಎಸ್ ಆರ್ ಪಿ ಪೋಲಿಸ್ ಸಿಬ್ಬಂದಿಗಳು, ಮುನಿರಾಬಾದ ಡ್ಯಾಂ ತೋಟಗಾರಿಕೆ ಮಹಾವಿದ್ಯಾಲಯದ ಅಧಿಕಾರಿಗಳು, ವಿದ್ಯಾರ್ಥಿಗಳು ಸದರಿ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗಿಯಾದರು. ಕಾರ್ಯಕ್ರಮದಲ್ಲಿ ಹೊಸಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಮಾರುತಿ ಬಗನಾಳ, ತುಂಗಭದ್ರಾ ಡ್ಯಾಂನ ಕಾರ್ಯಪಾಲಕ ಅಭಿಯಂತರರಾದ ಶಿವಶಂಕರ, ತಾಲೂಕ ಪಂಚಾಯತಿಯ ಸಹಾಯಕ ನಿರ್ದೇಶಕ ಮಹೇಶ್ ಎಚ್, ಗ್ರಾಮ ಪಂಚಾಯತಿ ಸದಸ್ಯರಾದ ನಿಂಗನಗೌಡ ಬೇವೂರು, ಖಾಜಾವಲಿ ಕಿನ್ನಾಳ, ಶರೀಫಸಾಬ ದೊಡ್ಡಮನಿ, ತಾಲೂಕ ಪಂಚಾಯತಿಯ ಬಸವರಾಜ ಬಳಿಗಾರ, ಐಇಸಿ ಸಂಯೋಜಕ ದೇವರಾಜ ಪತ್ತಾರ, ಗ್ರಾಮದ ಮುಖಂಡರಾದ ಗ್ಯಾನಪ್ಪ, ಡಾ. ಹೇಮಸುಂದರ, ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಅಲ್ಲಾಭಕ್ಷಿ, ಗ್ರಾಮ ಪಂಚಾಯತಿಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.