ಸುದ್ದಿಮೂಲ ವಾರ್ತೆ
ಹೊಸಕೋಟೆ,ಅ.1:ಯುವಜನತೆ ಸ್ವಯಂಪ್ರೇರಿತವಾಗಿ ಸ್ವಚ್ಛತೆಯಲ್ಲಿ ಪಾಲ್ಗೊಳ್ಳಬೇಕು. ಕಸ ಮುಕ್ತ ಗ್ರಾಮವನ್ನಾಗಿಸಲು ಸಹಕರಿಸಬೇಕು. ಸ್ವಚ್ಛತೆಗಾಗಿ ಕೆಲ ಸಮಯವನ್ನು ಮೀಸಲಿಟ್ಟರೆ, ಪ್ರತಿಯೊಬ್ಬರೂ ಆರೋಗ್ಯದಿಂದ ಜೀವನ ಸಾಗಿಸಲು ಸಾಧ್ಯ ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವೆಂಕಟೇಶ್ ತಿಳಿಸಿದರು.
ಹೊಸಕೋಟೆ ತಾಲೂಕಿನ ನಂದಗುಡಿ ಗಾಂಧಿ ಪಾರ್ಕ್ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಹಾಗೂ ನಂದಗುಡಿ ಗ್ರಾಮ ಪಂಚಾಯಿತಿ ಸ್ವಚ್ಛತಾ ಇ ಸೇವಾ ಕಾರ್ಯಕ್ರಮದಡಿ ಶ್ರಮದಾನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಕಸವನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡದೆ ವಿಲೇವಾರಿ ಮಾಡಿ, ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗದೆ. ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಬಹುದು. ಪ್ಲಾಸ್ಟಿಕ್ ಚೀಲವನ್ನಾಗಲಿ, ಅನುಪಯುಕ್ತ ವಸ್ತುಗಳನ್ನಾಗಲಿ ರಸ್ತೆಗಳ ಮೇಲೆ ಬಿಸಾಡದೇ ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಂಡಾಗ ಮಾತ್ರ ಸ್ವಚ್ಛ ಭಾರತ ನಿರ್ಮಾಣವಾಗಲಿದೆ.
ಗ್ರಾಮಸ್ಥರು ಆರೋಗ್ಯವನ್ನು ಕಾಪಾಡುವ ಹಿತ ದೃಷ್ಟಿಯಿಂದ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್ಡಿಎ ಸಂಪತ್ಕುಮಾರ್, ಕರವಸೂಲಿಗಾರ ಮನೋಜ್, ಗಣಕ ಯಂತ್ರ ನಿರ್ವಾಹಕಿ ನಯನ, ಸಿಬ್ಬಂದಿಗಳಾದ ಶಾಮಲ, ನಟರಾಜಪ್ಪ, ವೆಂಕಟೇಶಪ್ಪ, ರಮೇಶ್, ಮುನೇಗೌಡ, ಸುಬ್ಬರಾಯಪ್ಪ, ನಂದೀಶ, ಸುರೇಶ್ ಹಾಜರಿದ್ದರು.