ಸುದ್ದಿಮೂಲ ವಾರ್ತೆ
ಮಂಡ್ಯ,ಅ.2:ರಾಜ್ಯ ಸರ್ಕಾರ ಕಾವೇರಿಗೆ ಶಾಸ್ವತ ಪರಿಹಾರ ಕಂಡುಕೊಳ್ಳಲು ರಾಜ್ಯದ ಕಾನೂನು ತಜ್ಞರು, ಹೋರಾಟಗಾರರು ಹಾಗೂ ಪ್ರತಿಪಕ್ಷಗಳ ಅಭಿಪ್ರಾಯ ಪಡೆದು ಸರ್ವ ಸಮ್ಮತವಾದ ಸಂಕಷ್ಟ ಸೂತ್ರ ಸಿದ್ದಪಡಿಸಿ ಸಿಡಬ್ಲುಎಂಎ ಹಾಗೂ ಸುಪ್ರೀಂ ಕೋರ್ಟ್ ಮುಂದೆ ಮಂಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.
ಮಂಡ್ಯದಲ್ಲಿ ರೈತ ಹಿತರಕ್ಷಣಾ ಸಮಿತಿಯವರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಂಡ್ಯದಲ್ಲಿ ಕಾವೇರಿ ಹೋರಾಟವನ್ನು ಜಿವಂತ ಇಟ್ಡಿರುವ ಸುನಂದಮ್ಮ, ಅಂಬುಜಮ್ಮ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ನಾವು ಎಲ್ಲರೂ ನಿಮ್ಮ ಜೊತೆಗೆ ಇದ್ದೇವೆ. ಇಡೀ ಕರ್ನಾಟಕ ವಿಶೇಷವಾಗಿ ಬೆಂಗಳೂರಿನ ಜನ ಹೋರಾಟಗಾರರ ಜೊತೆಗೆ ಇದ್ದೇವೆ. ಕಾವೇರಿ ವಿವಾದ ಯಾಕೆ ಪದೇ ಒದೇ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಪರಿಹಾರ ಯಾವಾಗ ಅನ್ನುವುದರ ಆಧಾರದ ಮೇಲೆ ನಮ್ಮ ಹೋರಾಟ ನಡೆಯುತ್ತದೆ. ಕಾವೇರಿ ನದಿ ಹುಟ್ಟಿ ಅತಿ ಹೆಚ್ಚು ನೀರು ಹರಿಯುವುದು ನಮ್ಮ ರಾಜ್ಯದಲ್ಲಿ. ಕಡಿಮೆ ಕ್ಯಾಚ ಮೆಂಟ್ ಏರಿಯಾ ಇದ್ದರೂ ಅತಿ ಹೆಚ್ಚು ನೀರು ಹರಿಯುತ್ತಿದೆ. ತಮಿಳುನಾಡಿಗೆ ಎರಡು ಮನ್ಸೂನ್ ಗಳಿವೆ ಅವರಿಗೆ ನೀರಿನ ಕೊರತೆಯಿಲ್ಲ. ಅವರು ಹೆಚ್ಚುವರಿ ನೀರು ಸಮುದ್ರಕ್ಕೆ ಬಿಡುತ್ತಾರೆ. ನಾವು ನೀರು ಉಳಿಸಿಕೊಳ್ಳಲು ನಾಲ್ಕು ಡ್ಯಾಮ್ ಕಟ್ಟಿದ್ದೇವೆ. ಅವರು ಕಾವೇರಿ ಉಳಿಸಿಕೊಳ್ಳಲು ಹೆಚ್ಚಿನ ಪ್ರಯತ್ನವನ್ನೇ ಮಾಡಲಿಲ್ಲ. ಕೇವಲ ಎರಡು ಡ್ಯಾಮ್ ಕಟ್ಟಿದ್ದಾರೆ. ಶತಮಾನಗಳಿಂದಲೂ ಕಣ್ಣಂಬಾಡಿ ಕಟ್ಟುವಾಗಲೇ ತಮಿಳು ನಾಡಿನ ವಿರೋಧ ಇತ್ತು ಅವರ ಜೊತೆಗೆ ಮಾಡಿಕೊಂಡ ಒಪ್ಪಂದದಿಂದ ಈ ಪರಿಸ್ಥಿತಿ ಬಂದಿದೆ ಎಂದರು.
ಟ್ರಿಬ್ಯುನಲ್ ನಲ್ಲಿ ನಮ್ಮ ವಿರುದ್ದ ಆದೇಶ ಆಗಿರುವುದು ನಮ್ಮ ದುರಂತ. ಸಿಡಬ್ಲುಆರ್ ಸಿ, ಸಿಡಬ್ಲುಎಂಎ ಅಧಿಕಾರಿಗಳು ನ್ಯಾಯ ಮಂಡಳಿ ಆದೇವನ್ನು ಒಮ್ಮೆ ಓದಿ, ತಮಿಳುನಾಡು ಎಷ್ಟು ನಿರು ಬಳಕೆ ಮಾಡಬೇಕು ಯಾವ ಬೆಳೆ ಬೆಳೆಯಬೇಕು. ಕರ್ನಾಟಕವೂ ಯಾವ ಬೆಳೆ ಬೆಳೆಯಬೇಕು, ಎಷ್ಟು ಜೀರು ಬಳಕೆ ಮಾಡಬೇಕು ಎಂದು ಹೇಳಿದೆ. ರಾಜ್ಯ ಸರ್ಕಾರ ಇದನ್ನು ಬಲವಾಗಿ ವಾದಿಸಬೇಕಿತ್ತು. ತಮಿಳುನಾಡು ನಾಲ್ಕು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಕ್ರಮ ನೀರಾವರಿ ಮಾಡಿದೆ. ಸುಮಾರು 67 ಟಿಎಂಸಿ ನೀರು ಬಳಕೆ ಮಾಡಿಕೊಂಡಿದ್ದಾರೆ . ರಾಜ್ಯ ಸರ್ಕಾರದ ಅಧಿಕಾರಿಗಳು ಇದನ್ನು ಯಾಕೆ ಹೇಳುತ್ತಿಲ್ಲ. ಎಲ್ಲಿಯವರೆಗೂ ಇದನ್ನು ಹೇಳುವುದಿಲ್ಲವೊ ಅಲ್ಲಿಯವರೆಗೂ ಅವರು ನಮ್ಮ ನೀರನ್ನು ಕೇಳುತ್ತಾರೆ ಎಂದರು.
ನೀರು ಬಿಡುವುದಿಲ್ಲ ಎಂದಿದ್ದೆ
2012 ರಲ್ಲಿ ಸುಪ್ರೀಂ 12 ಟಿಎಂಸಿ ನೀರು ಬಿಡುವಂತೆ ಹೇಳಿತ್ತು. ಆಗ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟ್ ಆದೇಶ ಪಾಲಿಸುತ್ತೀರಾ ಇಲ್ಲಾ ನೀರು ಬಿಡುತ್ತಿರಾ ಎಂದು ಕೇಳಿದರು. ನಾನು ಆಗ ನೀರಾವರಿ ಸಚಿವನಾಗಿದ್ದೆ, ಸುಪ್ರೀಂ ಕೋರ್ಟ್ ಆದೇಶ ಪಾಲಿಸುತ್ತೇನೆ ನೀರು ಬಿಡುವುದಿಲ್ಲ ಎಂದು ಹೇಳಿದೆ. ದೆಹಲಿಗೆ ತೆರಳಿ ನಮ್ಮ ವಕೀಲರನ್ನು ಭೇಟಿ ಮಾಡಿ, ನೀರು ಬಿಡಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮುಂದೆ ಹೇಳಲು ಹೇಳಿದೆ. ಅವರು ನೀರು ಬಿಟ್ಡರೆ ಮಾತ್ರ ಸುಪ್ರೀಂ ಕೋರ್ಟ್ ಮುಂದೆ ನಿಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು. ನಾನು ಮಾಜಿ ಅಡ್ವೋಡೇಟ್ ಉದಯಹೊಳ್ಳ ಅವರನ್ನು ಕರೆದು, ವಸ್ತು ಸ್ಥಿತಿ ಹೇಳಲು ಹೇಳಿದೆ, ಅವರು ವಾದ ಮಾಡುತ್ತೇನೆ ಎಂದಾಗ ನಮ್ಮ ವಕೀಲರು ತಾವೇ ವಾದ ಮಾಡುವುದಾಗಿ ಹೇಳಿ ಬಲವಾಗಿ ವಾದ ಮಾಡಿದರು ಅದರ ಪರಿಣಾಮ ಕಡಿಮೆ ನೀರು ಬಿಡುವಂತಾಯಿತು. ಸುದೈವ ವಶಾತ್ ಮಳೆಯೂ ಆಯಿತು. ಸಮಸ್ಯೆ ಪರಿಹಾರವಾಯಿತು ಎಂದು ಹೇಳಿದರು.
ಸೋರಿಕೆ ತಡೆದೆ
ನಾನು ನೀರಾವರಿ ಸಚಿವನಾಗಿದ್ದಾಗ ಲೀಕೇಜ್ ರಿಪೈರಿ ಮಾಡಲು ಮುಂದಾದಾಗ ಇಂಜನಿಯರಗಳು. ಮಹಾರಾಜರು ಕಟ್ಟಿರುವ ಆಣೆಕಟ್ಟು ಮುಟ್ಟಲು ಕಷ್ಟ, ಏನಾದರೂ ಹೆಚ್ಚುಕಡಿಮೆ ಆದರೆ, ನೀವು ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ನನಗೆ ಹೆದರಿಸಿದರು. ನಾನು ಒಬ್ಬ ಎಂಜನೀಯರ್ ಆಗಿ ಅದನ್ನು ಸುಮ್ಮನೇ ಒಪ್ಪಿಕೊಳ್ಳಲು ಮನಸಾಗಲಿಲ್ಲ. ನಾನೇ ಬಂದು ರಿಪೇರಿ ಮಾಡಿಸಲು ಮುಂದಾದೆ. ಈಗ 18 ಗೆಟ್ ಲಿಕೇಜ್ ತಡೆಯಲಾಗಿದೆ. ಇನ್ನು ಐವತ್ತು ವರ್ಷ ಯಾವುದೇ ಸಮಸ್ಯೆ ಇಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ವಿಶ್ವೇಶ್ವರಯ್ಯ ಅವರು ಕಟ್ಟಿದ ಕಣ್ಣಂಬಾಡಿಗೆ ನನ್ನ ಸೇವೆಯೂ ಆಗಿರುವುದಕ್ಕೆ ತೃಪ್ತಿ ಇದೆ ಎಂದರು.
ಸಂಕಷ್ಟ ಸೂತ್ರ ರಚಿಸಲಿ
ರಾಜ್ಯ ಸರ್ಕಾರ ಕಾವೇರಿ ಸಮಸ್ಯೆಗೆ ಶಾಸ್ವತ ಪರಿಹಾರ ಕಂಡುಕೊಳ್ಳಲು ತನ್ನ ಕಾನೂನು ತಜ್ಞರೊಂದಿಗೆ ಕುಳಿತು ಸಂಕಷ್ಟ ಸೂತ್ರ ಏನಿರಬೇಕುವೆಂದು ತೀರ್ಮಾನ ಮಾಡಿ, ಪ್ರತಿಪಕ್ಷಗಳು ಹಾಗೂ ಹೋರಾಟಗಾರರ ಅಭಿಪ್ರಾಯ ಪಡೆದು ಸಂಕಷ್ಟ ಸೂತ್ರ ರಚನೆ ಮಾಡಬೇಕು. ಸಂಕಷ್ಟ ಸೂತ್ರ ಸರ್ವ ಸಮ್ಮತವಾಗಿರಬೇಕು ಎಂದರು.
ಇನ್ನು ಮೇಕೆದಾಟು ಯೋಜನೆ ಜಾರಿ ಕುರಿತು ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಬಲವಾಗಿ ವಾದ ಮಾಡಬೇಕು. ಇದು ತಕ್ಷಣ ಆಗದಿದ್ದರೂ ಮುಂದಿನ ಜನಾಂಗಕ್ಕಾದರೂ ಅನುಕೂಲ ಆಗುತ್ತದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ಮೊದಲಿನಿಂದಲೂ ಎಡವುತ್ತಿದೆ. ಸರ್ವ ಪಕ್ಷಗಳ ಸಭೆಯಲ್ಲಿ ನೀರು ಕಡಿಮೆ ಬಿಡುತ್ತಿರುವುದೇ ಸಾಧನೆ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಮೊದಲು ಸುಪ್ರೀಂ ಕೊರ್ಟ್ ನಲ್ಲಿ ಐಎ ಹಾಕಿದ್ದ ರೆ ನಮಗೆ ವಾಸ್ತವ ಸ್ಥಿತಿ ಹೇಳಲು ಹೆಚ್ಚು ಅವಕಾಶ ಇರುತ್ತದೆ. ರಾಜ್ಯ ಸರ್ಕಾರ ಮೊದಲು ಐಸಿಸಿ ಮೀಟಿಂಗ್ ಮಾಡಿ ರಾಜ್ಯದ ರೈತರ ಹೊಲಗಳಿಗೆ ನೀರು ಬಿಟ್ಟಿದ್ದರೆ ಈಗ ರಾಜ್ಯದ ರೈತರಿಗೆ ಸಮಸ್ಯೆಯಾಗುತ್ತಿರಲಿಲ್ಲ. ಆಗಸ್ಟ್ ನಲ್ಲಿ ಐಸಿಸಿ ಸಭೆ ನಡೆಸಿದ್ದರಿಂದ ತಮಿಳುನಾಡಿಗೆ ಹೆಚ್ಚಿನ ನೀರು ಬಿಡುವಂತೆ ಆಯಿತು. ಈಗಾಗಲೇ ತಡವಾಗಿದೆ. ಸರ್ಕಾರ ಸಂಕಷ್ಟ ಸೂತ್ರ ಮೇಕೆದಾಟು ಬಗ್ಗೆ ತಕ್ಷಣ ವಾದ ಮಾಡಬೇಕು. ನಾವೆಲ್ಲ ಸರ್ಕಾರದ ಜೊತೆಗೆ ಇದ್ದೇವೆ. ಸರ್ಕಾರ ದಾರಿ ತಪ್ಪಿದಾಗ ರೈತರ ಪರವಾಗಿ ಇದ್ದೇವೆ. ಈ ಸರ್ಕಾರವನ್ನು ಎಚ್ಚರಿಸಲು ಹೋರಾಟ ಅಗತ್ಯವಿದೆ. ನಿಮ್ಮ ಹೋರಾಟಕ್ಕೆ ನಿರಂತರ ನಮ್ಮ ಬೆಂಬಲ ಇದೆ. ಈ ಹೋರಾಟ ಯಶಸ್ವಿಯಾಗಲಿದೆ. ಇಲ್ಲಿಯೇ ವಿಜಯೋತ್ಸವ ಆಚರಿಸೋಣ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮಾಜಿ ಡಿಸಿಎಂ ಆರ್ ಅಶೋಕ್, ಶಾಸಕ ರವಿ ಸುಬ್ರಮಣ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಗಳು ಹಾಗೂ ಮತ್ತಿತರರು ಹಾಜರಿದ್ದರು.