ಸುದ್ದಿಮೂಲ ವಾರ್ತೆ
ಹೊಸಕೋಟೆ,ಅ.2: ಕೊಲ್ಕತ್ತ, ಐಶ್ವರ್ಯ, ಪೂರ್ಣಿಮಾ, ಮುಸ್ಕಿನ್ವೈಟಿನಂತಹ ಸೇವಂತಿಗೆ, ಚೆಂಡು ಹೂವು ಬೆಳೆದ ರೈತರು ಬೆಳೆಗೆ ಬೆಲೆ ಇಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ.
ಸಾವಿರಾರು ರೂಪಾಯಿ ಸಾಲ ಮಾಡಿ ಬೆಳೆಯ ನೀರಿಕ್ಷೆಯಲ್ಲಿದ್ದ ರೈತರು, ಬೆಲೆ ಇಲ್ಲದೆ ಬೆಳೆದಿದ್ದ ಸೇವಂತಿಗೆ ಹೂವನ್ನು ತೋಟದಲ್ಲೇ ಬಿಡುವಂತಹ ಸನ್ನಿವೇಶ ಎದುರಾಗಿದೆ.
ಸೇವಂತಿಗೆ ಬೆಳೆದಿರುವ ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ರೈತರು ಸುಮಾರು 1200 ರಿಂದ 1300 ಅಡಿ ಆಳದ ಕೊಳವೆ ಬಾವಿ ಕೊರೆಸಿದರು. ಸರಿಯಾದ ನೀರು ಸಿಗುತ್ತಿಲ್ಲ. ಇಂತಹದರಲ್ಲಿ ಈ ವರ್ಷ ಬಂಪರ್ ಬೆಳೆಯಾಗಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ 5 ರಿಂದ 10 ರೂ. ಕೆ.ಜಿಗೆ ಸಿಗುತ್ತಿದೆ. ಅದೇ ಹಬ್ಬದಂದು 300 ರಿಂದ 350 ರೂ. ಕೆ.ಜಿಗೆ ಇತ್ತು. ತದನಂತರ ಶ್ರಾವಣ ಮಾಸದಲ್ಲಿ 100ರೂ. ನಂತೆ ಇತ್ತು. ಇದೀಗ ದಿಢೀರನೆ ಕುಸಿದು ರೈತರಿಗೆ ನಷ್ಟ ಉಂಟಾಗಿದೆ.
ಸುಮಾರು 1 ಎಕರೆ ಜಮೀನಿಗೆ 2 ಲಕ್ಷದಷ್ಟು ಬಂಡವಾಳ ಹಾಕಿದ್ದು. ಬಂಡವಾಳ ಬಾರದೆ ಪರಿದಾಡುವಂತಾಗಿದೆ. ಹಾಕಿದ ಬಂಡವಾಳಕ್ಕೆ ಬಡ್ಡಿ ಕಟ್ಟದೆ ಸಾಯುವ ಸ್ಥಿತಿ ತಲುಪಿದ್ದೇನೆ ಎಂದು ಅಳಿಲು ತೊಡಿಕೊಂಡರು.
ಬೆಳೆದ ಬೆಳೆಯನ್ನು ರೈತರಿಂದ ಸರ್ಕಾರವೇ ಕೊಳ್ಳುವಂತಾಗಬೇಕು. ಮುಂದಿನ ದಿನಗಳಲ್ಲಿ
ಬೆಳೆಯೆ ಬೆಳೆಯುವುದು ಬೇಡವೆಂದು ಬೇಸರವಾಗುತ್ತಿದೆ. ಕನಿಷ್ಠ ಮಕ್ಕಳ ವಿದ್ಯಾಭ್ಯಾಸಕ್ಕಾದರೂ ಮನೆಯ ಕುಟುಂಬ ನಿರ್ವಹಣೆಗೆ ಆಗದ ಇಂತಹ ಉದ್ಯೋಗ ಏಕೆ ಬೇಕು. ಇದರ ನಷ್ಟ ಪರಿಹಾರ ಸರ್ಕಾರ ಕೊಟ್ಟು ನಮ್ಮ ಕುಟುಂಬ ಪೋಷಣೆಗೆ ಮುಂದಾಬೇಕೆಂದು ಮನವಿ ಮಾಡಿದರು.
ಈ ಭಾಗದಲ್ಲಿ ಸೇವಂತಿಗೆ ಬೆಳೆದಿದ್ದ ಬಹುತೇಕ ರೈತರ ಅಳಲು ಇದಾಗಿದೆ. ರೈತರಿಗೆ ಹಾಕಿದ ಬಂಡವಾಳ ಸಿಗದೆ ಕೂಲಿ ಕೊಟ್ಟು ಕೀಳಿಸಲು ಆಗದೆ ಹೂವನ್ನು ಬೀಸಾಡುವ ಸ್ಥಿತಿ ಬಂದಿದೆ.
ಬಂಪರ್ ಬೆಳೆಯಿಂದ ಸಂತೋಷ ಪಡುವ ಬದಲು ದುಃಖ ಪಡುವಂತಾಗಿದೆ. ಬೆಳೆಗೆ ದರಸಿಗದೆ ಹೆಚ್ಚಾಗಿ ಮಧ್ಯವರ್ತಿಗಳಿಗೆ ಕಮೀಷನ್ ಹೋಗುತ್ತಿದ್ದು, ಕೈ ತುಂಬಾ ಹಣ ಸಿಗುತ್ತಿದೆ.
ಕಷ್ಟ ಪಟ್ಟು ಹಗಲು ರಾತ್ರಿ ದುಡಿದ ಬೆಳೆಗಾರನಿಗೆ ನಯಾ ಪೈಸೆ ಸಿಗುತ್ತಿಲ್ಲ. ಮಾರುಕಟ್ಟೆಗೆ ವ್ಯಾಪಕವಾಗಿ ಹೂವು ಬರುತ್ತಿದೆ. ಆದರೆ, ಬೇಡಿಕೆ ಹೇಳಿಕೊಳ್ಳುವಷ್ಟಿಲ್ಲ. ಇದರಿಂದ ದರ ಕುಸಿತವಾಗಿದೆ ಎನ್ನುತ್ತಾರೆ ದಿನ್ನಹಳ್ಳಿ ನಾರಾಯಣಪ್ಪ .