ಸುದ್ದಿಮೂಲ ವಾರ್ತೆ
ಹೊಸಕೋಟೆ, ಅ. 2 : ನಾವು ಬದುಕಿರುವ ತನಕ ನಮ್ಮ ದೇಹವನ್ನು ಉತ್ತಮವಾಗಿ ನೋಡಿಕೊಳ್ಳುತ್ತೇವೆ. ಅನಂತರ ನಮ್ಮ ದೇಹದ ಅಂಗಾಂಗಗಳು ಮತ್ತೊಂದು ಜೀವಕ್ಕೆ ಆಸರೆಯಾಗುವುದಾದರೆ ಅಂಗಾಂಗಗಳನ್ನು ದಾನ ಮಾಡುವುದು ಉತ್ತಮ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಆಯುಷ್ಮಾನ್ ಭವ 3.0 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವು ನಮ್ಮ ಮರಣ ನಂತರ ನಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡುವುದಾದರೆ ನಾವು ಬದುಕಿರುವಾಗಲೇ ನಮ್ಮ ಅಂಗಾಂಗಳನ್ನು ಉತ್ತಮವಾಗಿ ನೋಡಿಕೊಳ್ಳಬೇಕು. ಆಗ ಮಾತ್ರ ನಮ್ಮ ನಂತರ ದಾನ ಮಾಡುವ ಅಂಗಾಂಗಗಳು ಉತ್ತಮ ಕಾರ್ಯನಿರ್ವಹಿಸಲು ಸಾದ್ಯ ಎಂದರು.
ನಮ್ಮ ದೇಶದಲ್ಲಿ ಪ್ರತಿದಿನ ಸಾವಿರಾರು ಜನ ಸಾವನ್ನಪ್ಪುತಿದ್ದಾರೆ. ಅದರಲ್ಲಿ ಕೆಲವರು ಆರೋಗ್ಯ ಸಮಸ್ಯೆಯಿಂದ ಮೃತಪಟ್ಟರೆ ಮತ್ತೆ ಕೆಲವರು ಅಪಘಾತಗಳಿಂದ ಸಾವನಪ್ಪುತಿದ್ದಾರೆ. ಅವರ ಅಂಗಾಂಗಗಳನ್ನು ಅವಶ್ಯವಿರುವವರಿಗೆ ದಾನ ಮಾಡಿದಲ್ಲಿ ದೇಶದಲ್ಲಿನ ಅಂಗವಿಕಲತೆಯ ಸಮಸ್ಯೆಯನ್ನು ಗಣನೀಯವಾಗಿ ಕಡಿಮೆಗೊಳಿಸುವ ಮೂಲಕ ಆರೋಗ್ಯವಂತ ಭಾತರತದ ಕನಸನ್ನು ನನಸಾಗಿಸಬಹುದು. ಹೀಗಾಗಿ, ಹೆಚ್ಚು ಸಂಖ್ಯೆಯಲ್ಲಿ ಸಾರ್ವಜನಿಕರು ತಮ್ಮ ಮರಣಾನಂತರ ಅಂಗಾಂಗ ದಾನಕ್ಕೆ ಮುಂದಾಗಬೇಕು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ ವೀಣಾ ಮಾತನಾಡಿ, ರಾಜ್ಯದಲ್ಲೇ ಅಂಗಾಂಗಳನ್ನು ದಾನ ಮಾಡಿದ ಮೊದಲ ಶಾಸಕ ಎಂಬ ಹೆಗ್ಗಳಿಕೆಗೆ ಶರತ್ ಬಚ್ಚೇಗೌಡರು ಪಾತ್ರರಾಗಿದ್ದಾರೆ. ನಮ್ಮ ಇಲಾಖೆಯ ಹಲವರು ಇಂದು ಅಂಗಾಂಗ ದಾನ ಮಾಡಲು ಮುಂದಾಗಿರುವುದು ಸಂತಸ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಂ ವಿಜಯ್ ಕುಮಾರ್, ನಗರಸಭೆ ಸದಸ್ಯ ಕೇಶವ್ ಮೂರ್ತಿ, ಗೋಪಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್, ಆರೋಗ್ಯ ನಿರೀಕ್ಷಣಾಧಿಕಾರಿ ರವಿ ಮೊದಲಾದವರು ಹಾಜರಿದ್ದರು.