ಸುದ್ದಿಮೂಲ ವಾರ್ತೆ
ಅ.3:ಗ್ರಾಮೀಣ ಜನತೆಗೆ ಅವಶ್ಯವಿರುವ ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲು 2016ರಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಆರಂಭಿಸಿದ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಈಗಾಗಲೆ ಒದಗಿಸುತ್ತಿರುವ 28 ಸೇವೆಗಳ ಜೊತೆಗೆ ನಾಡಕಚೇರಿಗಳ ಅಟಲ್ಜಿ ಜನಸ್ನೇಹಿ ಕೇಂದ್ರಗಳಲ್ಲಿ ಲಭ್ಯವಿದ್ದ ಇನ್ನೂ 44 ಸೇವೆಗಳನ್ನು ಪಡೆದುಕೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅನುವು ಮಾಡಿಕೊಟ್ಟಿದ್ದು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಈ ಸೇವೆಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೇವೆಗಳ ಜೊತೆಯಲ್ಲಿ ಇನ್ನುಮುಂದೆ ಸಾರ್ವಜನಿಕರು ಕಂದಾಯ, ಕಾರ್ಮಿಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಇಂಧನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗಳ ಸೇವೆಗಳನ್ನು ಪಡೆಯಬಹುದಿದ್ದು, ಆಧಾರ್ ಸೇವೆಗಳ ಸೌಲಭ್ಯವನ್ನು ಹೊಂದಬಹುದಾಗಿದೆ.
ಪ್ರತಿಯೊಂದು ಹೋಬಳಿಯು 6-7 ಗ್ರಾಮ ಪಂಚಾಯತಿಗಳನ್ನು ಹೊಂದಿದ್ದು, ಈ ವ್ಯಾಪ್ತಿಯ 20-50 ಸಾವಿರ ಜನರು ವಿವಿಧ ಸರ್ಕಾರಿ ಸೇವೆಗಳನ್ನು ಪಡೆಯಲು ಹೋಬಳಿ ಕೇಂದ್ರಕ್ಕೆ ಹೋಗಬೇಕಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗಿತ್ತು.
ಈ ಸಮಸ್ಯೆಗೆ ಪರಿಹಾರವಾಗಿ ನಾಡಕಚೇರಿಗಳ ಅಟಲ್ಜಿ ಜನಸ್ನೇಹಿ ನಿರ್ದೇಶನಾಲಯದಡಿ ಸಿಗುತ್ತಿದ್ದ ಆದಾಯ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸ ಸ್ಥಳ ಪ್ರಮಾಣ ಪತ್ರ ಗಳಂತಹ ಪ್ರಮುಖ ಸೇವೆಗಳನ್ನು ದಕ್ಷ ಹಾಗೂ ತ್ವರಿತ ರೀತಿಯಲ್ಲಿ ಗ್ರಾಮ ಪಂಚಾಯತಿಗಳ ಮೂಲಕವೇ ನೀಡಲು ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೂತನವಾಗಿ ಒದಗಿಸಲು ಸರ್ಕಾರವು ನಿರ್ಧರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬಾಪೂಜಿ ಸೇವಾ ಕೇಂದ್ರಗಳಲ್ಲಿ ಲಭ್ಯವಿರುವ ಸೇವೆಗಳು: ಜನಸಂಖ್ಯಾ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ (ಪ್ರವರ್ಗ-ಎ), ಜಾತಿ ಪ್ರಮಾಣ ಪತ್ರ (ಅ.ಜಾ/ಅ.ಪಂ), ಹಿಂದುಳಿದ ವರ್ಗ ಪ್ರ.ಪತ್ರ (ಕೇ.ಸ), ವಾಸ ಸ್ಥಳ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಗೇಣಿರಹಿತ ದೃಢೀಕರಣ ಪತ್ರ, ವಿಧವೆ ದೃಢೀಕರಣ ಪತ್ರ, ಜೀವಂತ ದೃಡೀಕರಣ ಪತ್ರ, ವ್ಯವಸಾಯಗಾರರ ಕುಟುಂಬದ ದೃಡೀಕರಣ ಪತ್ರ, ಮರುವಿವಾಹವಾಗದಿರುವ ಬಗ್ಗೆ ದೃಡೀಕರಣ ಪತ್ರ, ಜಮೀನು ಇಲ್ಲದಿರುವ ಬಗ್ಗೆ ದೃಡೀಕರಣ ಪತ್ರ, ಮೃತರ ಕುಟುಂಬ ಸದಸ್ಯರ ದೃಡೀಕರಣ ಪತ್ರ, ನಿರುದ್ಯೋಗಿ ದೃಢಿಕರಣ ಪತ್ರ, ಸರ್ಕಾರಿ ನೌಕರಿ ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ, ವ್ಯವಸಾಯಗಾರ ದೃಡಿಕರಣ ಪತ್ರ, ಸಣ್ಣ /ಅತಿ ಸಣ್ಣ ಹಿಡುವಳಿದಾರ ಪ್ರಮಾಣ ಪತ್ರ, ಕೃಷಿ ಕಾರ್ಮಿಕ ಪ್ರಮಾಣ ಪತ್ರ, ಮೇಲುಸ್ಥರಕ್ಕೆ ಸೇರಿಲ್ಲವೆಂದು ದೃಢಿಕರಣ ಪತ್ರ, ಭೂ ಹಿಡುವಳಿ ಪ್ರಮಾಣ ಪತ್ರ, ಬೋನಫೈಡ್ ದೃಡಿಕರಣ ಪತ್ರ, ಸಾಲ ತೀರಿಸುವ ಶಕ್ತಿ ಪ್ರಮಾಣ ಪತ್ರ, ನಿವಾಸಿ ಪ್ರಮಾಣ ಪತ್ರ, ಆದಾಯ ದೃಢಿಕರಣ ಪತ್ರ (ಉದ್ಯೋಗದ ಸಲುವಾಗಿ ಮಾತ್ರ), ಆದಾಯ ದೃಢಿಕರಣ ಪತ್ರ (ಅನುಕಂಪದ ಆದಾರದ ನೇಮಕಾತಿಗೆ), ಕುಟುಂಬ ವಂಶವೃಕ್ಷ ದೃಢಿಕರಣ ಪತ್ರ, ಹೈದ್ರಾಬಾದ್-ಕರ್ನಾಟಕ ವಿಭಾಗ/ವಲಯದ ವಾಸಸ್ಥಳ ದೃಢೀಕರಣ ಪತ್ರ, ಬೆಳೆ ದೃಡೀಕರಣ ಪತ್ರ, ಅಲ್ಪಸಂಖ್ಯಾತ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ (ಆರ್ಯ ವೈಶ್ಯ), ಆದಾಯ ಹಾಗೂ ಆಸ್ತಿ ಪ್ರಮಾಣಪತ್ರ (EWS), ಜಾತಿ ಪ್ರಮಾಣಪತ್ರ (SC/ST-Migrant), ಅಂಗವಿಕಲ ಪೋಷಣಾ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ರಾಷ್ಟ್ರೀಯ ಕುಟುಂಬ ಕ್ಷೇಮ ಯೋಜನೆ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಮೈತ್ರಿ, ಮನಸ್ವಿನಿ, ಅಂತ್ಯ ಸಂಸ್ಕಾರ ಯೋಜನೆ, ಆಸಿಡ್ ದಾಳಿಗೊಳಗಾದ ಮಹಿಳೆಯ ವೇತನ, ರೈತರ ವಿಧವಾ ವೇತನ ಮತ್ತು ಎಂಡೋಸಲ್ಫಾನ್ ವಿಕ್ಟಿಮ್ ಪೆನ್ಷನ್.