ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.3: ಶ್ರೀನಿವಾಸಪುರದಲ್ಲಿ ಕಳೆದ ಹತ್ತಾರು ವರ್ಷಗಳಿಂದ ವ್ಯವಸಾಯ ಮಾಡುವ ಅನ್ನದಾತರ ಮೇಲೆ ದೌರ್ಜನ್ಯ ನಡೆದಿದೆ. ಈ ಸರಕಾರ ಭೂಗಳ್ಳರ ಸರಕಾರ. ಈ ಸರಕಾರ ರೈತವಿರೋಧಿ ಮಾತ್ರವಲ್ಲ; ಭೂಗಳ್ಳರ ಸರಕಾರ ಎಂದು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ ಅವರು ಎಚ್ಚರಿಸಿದರು.
ಕೋಲಾರದಲ್ಲಿ ಇಂದು ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಸರಕಾರಕ್ಕೆ ತಾಕತ್ತಿದ್ದರೆ ಅರ್ಕಾವತಿ ಹಗರಣಕ್ಕೆ ಸಂಬಂಧಿಸಿದ ಕೆಂಪಣ್ಣ ವರದಿಯನ್ನು ಮಂಡಿಸಬೇಕು. ನೈಸ್ ಹಗರಣದಲ್ಲಿ ರೈತರ ಭೂಮಿ ಕಿತ್ತುಕೊಂಡ ಸಂಬಂಧದ ಟಿ.ಬಿ.ಜಯಚಂದ್ರರ ಸದನ ಸಮಿತಿ ವರದಿಯನ್ನು ಮಂಡಿಸಬೇಕು ಎಂದು ಆಗ್ರಹಿಸಿದರು. ಆಗ ಬಹಳ ಜನ ಭೂಗಳ್ಳರು ಸರಕಾರ ಭಾಗ ಆಗಿರುವುದು ಗೊತ್ತಾಗುತ್ತದೆ ಎಂದು ನುಡಿದರು.
ಈ ಸರಕಾರದ ಪಾಪದ ಕೊಡ ತುಂಬಿದೆ ಎಂದ ಅವರು, ಈ ಪಾಪಿಗಳ ಸರಕಾರ ಮುಂದುವರೆಯಬೇಕಾ ಎಂದು ಪ್ರಶ್ನಿಸಿದರು. ಮರ ಕಡಿದ ಪಾಪಿಯ ಪಾಪಕ್ಕೆ ಪ್ರಾಯಶ್ಚಿತ್ತ ಇಲ್ಲವೆನ್ನಲು ಇಲ್ಲಿ ಬಂದಿದ್ದೇವೆ ಎಂದು ತಿಳಿಸಿದರು. ಪಾಪಿಗಳು ನೀವು; ನಿಮ್ಮನ್ನು ನಂಬಿ ಅಧಿಕಾರ ಕೊಟ್ಟದ್ದಕ್ಕೆ ಒಕ್ಕಲೆಬ್ಬಿಸುವ ಕೆಲಸ ಮಾಡಿದ್ದೀರಿ ಎಂದು ಟೀಕಿಸಿದರು.
ಇಲ್ಲಿನ ಪ್ರತಿಭಟನೆಗೆ ಸಿ.ಟಿ.ರವಿ ಬರಬಾರದು ಎನ್ನಲು ಇದೇನು ಪಾಕಿಸ್ತಾನದಲ್ಲಿದೆಯೇ ಎಂದು ಕೇಳಿದರು. ನಾನು ತಾಲಿಬಾಲಿನವನಲ್ಲ; ಬಾಂಬ್ ಹಾಕಿದವನಲ್ಲ. ಕೋಲಾರದ ಜನರು ಉಂಡ ಮನೆಗೆ ಎರಡು ಬಗೆದವರ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಮಾತನಾಡಿ, ಜನರಿಂದ ಆಯ್ಕೆಯಾದ ನಮ್ಮ ಸಂಸದ ಮುನಿಸ್ವಾಮಿಯವರನ್ನು ವೇದಿಕೆಯಿಂದ ಕೆಳಕ್ಕಿಳಿಸಿದ್ದರ ಔಚಿತ್ಯ ಏನು? ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು. ಅವರನ್ನು ಅವಮಾನಿಸಿದ್ದು, ಸಂವಿಧಾನ ವಿರೋಧಿ ಕ್ರಮವಲ್ಲವೇ ಎಂದು ಕೇಳಿದರು. ಹಾಗಿದ್ದರೆ ನಿಮ್ಮ ಎಸ್ಪಿಯನ್ನು ಕೂಡಲೇ ಅಮಾನತು ಮಾಡಿ ಎಂದು ಒತ್ತಾಯಿಸಿದರು.
ದೇಶ ಮತ್ತು ವಿದೇಶಗಳಿಗೆ ಮಾವಿನಹಣ್ಣು ಕಳಿಸುವ ಶ್ರೀನಿವಾಸಪುರ ತಾಲ್ಲೂಕಿನ ರೈತರ ಜಮೀನಿಗೆ ಕಳ್ಳರಂತೆ 70-80 ಜೆಸಿಬಿ ಜೊತೆ ರಾತ್ರೋರಾತ್ರಿ ಬಂದ ಡಿಎಫ್ಒ ಏಡುಕೊಂಡ್ಲು, ಮಾವಿನ ಮರಗಳನ್ನು ಬೀಳಿಸಿದ್ದಾರೆ. ನೋಟಿಸ್ ಕೂಡ ನೀಡದೆ ಅಕ್ರಮವಾಗಿ ನಾಶ ಕಾರ್ಯ ನಡೆದಿದೆ. ಡಿಎಫ್ಒರನ್ನು ಕೂಡಲೇ ಅಮಾನತು ಮಾಡಿ ಎಂದು ಆಗ್ರಹಿಸಿದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಒಂದಿಂಚು ಜಮೀನನ್ನೂ ಮುಟ್ಟಿಲ್ಲ ಎಂದು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ.ಸದಾನಂದ ಗೌಡ ಅವರು ಮಾತನಾಡಿ, ಸರಕಾರ ಪ್ರಜಾತಂತ್ರ ವ್ಯವಸ್ಥೆಗೆ ಅವಮಾನ ಮಾಡಿದೆ. ಬಾಬಾಸಾಹೇಬ ಡಾ.ಅಂಬೇಡ್ಕರರ ಸಂವಿಧಾನಕ್ಕೆ ಅವಮಾನ ಮಾಡಿದ್ದು ಖಂಡನಾರ್ಹ. ಇದನ್ನು ಗಮನಿಸಿದ ಜನತೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು.
ವಿಧಾನ ಪರಿಷತ್ ಸದಸ್ಯ ಮತ್ತು ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಸಂಸದ ಮುನಿಸ್ವಾಮಿ, ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್, ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ, ಮಾಜಿ ಸಚಿವ ವರ್ತೂರ್ ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.