ತುಮಕೂರು, ಅ. 3 : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದ ನಗರದ ಅಂತರಸನಹಳ್ಳಿಯಲ್ಲಿರುವ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಭೇಟಿ ನೀಡಿ ಪರಿಶೀಲಿಸಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನಂತರ ಮಾತನಾಡಿದ ಅವರು, ನಿಲಯವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಎಲೆಕ್ಟ್ರಿಕ್ ವೈರ್ಗಳು ಕೈಗೆಟಕದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಿಲಯದ ಮೇಲ್ಮಹಡಿ ಮೇಲೆ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಛಾವಣಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. ಇದರಿಂದ ಕಟ್ಟಡ ಮಳೆ ನೀರಿನಿಂದಾಗಿ ಸೋರಿಕೆಯಾಗುವುದನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಗಂಗಪ್ಪ ಹಾಗೂ ತಾಲ್ಲೂಕು ಅಧಿಕಾರಿ ಗೀತಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ನಂತರ ಜಿಲ್ಲಾಸ್ಪತ್ರೆಯಲ್ಲಿರುವ ಟ್ರಾಮಾಕೇರ್ ಸೆಂಟರ್ಗೆ ಭೇಟಿ ನೀಡಿದ ಅವರು, ಉದ್ಘಾಟನೆಯಾಗಿದ್ದರೂ ರೋಗಿಗಳಿಗೆ ಈವರೆಗೂ ಸೇವೆ ಒದಗಿಸದೇ ಇರುವ ಬಗ್ಗೆ ಪ್ರಶ್ನಿಸಿದಾಗ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ವೀಣಾ ಉತ್ತರಿಸಿ ಟ್ರಾಮಕೇರ್ ಸೆಂಟರ್ಗೆ ನೇಮಕ ಮಾಡಿಕೊಂಡಿರುವ ಮನವಸಂಪನ್ಮೂಲದವರಿಗೆ ತರಬೇತಿ ನೀಡಲಾಗುತ್ತಿದೆ ಹಾಗೂ ಅಪಘಾತ ಚಿಕಿತ್ಸಾ ಕೇಂದ್ರಕ್ಕೆ ಅಗತ್ಯವಿರುವ ಉಪಕರಣಗಳ ಸ್ಥಳಾಂತರ ಕಾರ್ಯ ನಡೆಯುತ್ತಿರುವುದರಿಂದ ಅ.5 ರಿಂದ ಸೇವೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.