ಸುದ್ದಿಮೂಲವಾರ್ತೆ
ಕೊಪ್ಪಳ,ಅ.5: ಕೊಪ್ಪಳ ಸುತ್ತಮುತ್ತಲಿನ ಪ್ರದೇಶದಲ್ಲಿ ಉಕ್ಕು ಕಾರ್ಖಾನೆಗಳಿಂದ ಪರಿಸರ ಹಾನಿಯಾಗಿದೆ. ಈ ಮಧ್ಯೆ ಈಗಿರುವ ಕಾರ್ಖಾನೆಗಳು ಉತ್ಪಾದನೆ ಹೆಚ್ಚಿಸಲು ವಿಸ್ತರಣೆಗೆ ಮುಂದಾಗಿವೆ. ಈಗಿರುವ ಕಾರ್ಖಾನೆಯಿಂದಲೇ ನಮಗೆ ಸಾಕು ಬೇಕಾಗಿದೆ. ಮತ್ತೆ ಕಾರ್ಖಾನೆ ವಿಸ್ತರಣೆ ಬೇಡ ಎಂದು ಗ್ರಾಮಸ್ಥರು ವಿರೋಧಿಸಿದ ಘಟನೆ ಇಂದು ಹಾಲವರ್ತಿ ಬಳಿ ನಡೆದಿದೆ.
ಕೊಪ್ಪಳ ತಾಲೂಕಿನ ಹಾಲವರ್ತಿ ಬಳಿ ಇರುವ ಪಿಬಿಎಸ್ ಸ್ಟಿಲ್ ಕಾರ್ಖಾನೆಯು ಎರಡನೆಯ ಹಂತದಲ್ಲಿ ವಿಸ್ತರಣೆಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಇಂದು ಕೊಪ್ಪಳ ಜಿಲ್ಲಾಧಿಕಾರಿ ನಲಿನಿ ಅತುಲ್ ಅಧ್ಯಕ್ಷತೆಯಲ್ಲಿ ಪರಸರ ಸಾರ್ವಜನಿಕ ಆಲಿಕೆ ಸಭೆಯನ್ನು ಕರೆಯಲಾಗಿತ್ತು. ಹಾಲವರ್ತಿ ಹಾಗು ಸುತ್ತಲಿನ ಗ್ರಾಮಸ್ಥರು ಆಗಮಿಸಿ ಒಕ್ಕೂರಲಿನಿಂದ ಪಿಬಿಎಸ್ ಒಂದನೆಯ ಘಟಕವನ್ನೆ ಬಂದ್ ಮಾಡಿ ಎಂದು ಆಗ್ರಹಿಸಿದರು.
ಪಿಬಿಎಸ್ ಕಾರ್ಖಾನೆಯ ಧೂಳಿನಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಗ್ರಾಮದಲ್ಲಿ ಎಲ್ಲಿಬೇಕೆಂದರಲ್ಲಿ ಧೂಳು ಆವರಿಸಿ ಪರಿಸರ ಹಾನಿಯಾಗಿದೆ. ಈ ಮಧ್ಯೆ ಇದೇ ಕಾರ್ಖಾನೆಯ ವಿಸ್ತರಣೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕಾರ್ಖಾನೆಗಳಿಂದ ಆಗುತ್ತಿರುವ ಪರಿಸರ ಹಾನಿ ನಿಯಂತ್ರಿಸಬೇಕು.ಹದಿನೈದು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಕಾರ್ಖಾನೆಯ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಸಭೆಯಲ್ಲಿ ಆಗಿರುವ ಚರ್ಚೆಯನ್ನು ಸರಕಾರಕ್ಕೆ ವರದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.