ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.5: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಸಂಚಾರಿ ಒತ್ತಡದ ಕಿರಿಕಿರಿಯನ್ನು ತಪ್ಪಿಸಲು 190 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕಾಗಿ 8 ಕಂಪನಿಗಳು ಅರ್ಹತೆ ಪಡೆದುಕೊಂಡಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಕಂಪನಿಗಳು ಕಾರ್ಯಸಾಧ್ಯತಾ ವರದಿ ಸಲ್ಲಿಸಿದ್ದು, 45 ದಿನಗಳ ಒಳಗಾಗಿ ಸಾರ್ವಜನಿಕ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ, ಎಂದು ಅವರು ಹೇಳಿದರು.
ಮಹಾನಗರದ ರಸ್ತೆ ಮೂಲ ಸೌಕರ್ಯ, ಸಂಚಾರ ವಿಕೇಂದ್ರಿಕರಣ, ಸುರಂಗಮಾರ್ಗ, ರಸ್ತೆ ಅಗಲೀಕರಣ, ಸಂಚಾರ ನಿರ್ವಹಣೆ, ಮೇಲ್ಸೇತುವೆ ಸೇರಿದಂತೆ ಹಲವು ರೀತಿಯ ಯೋಜನೆಗಳ ನಿರ್ವಹಣೆಗೆ ಸಮಗ್ರ ಯೋಜನೆ ರೂಪಿಸಿದ್ದು ಮುಂದಿನ 45 ದಿನದಲ್ಲಿ ಟೆಂಡರ್ ಕರೆಯಲಾಗುವುದು ಎಂದು ಹೇಳಿದ್ಧಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಂಗಳೊಳಗೆ ಸಮಾಲೋಚನಾ ಪ್ರಕ್ರಿಯೆ ಪೂರ್ಣಗೊಳಿಸಿ ಡಿಸೆಂಬರ್ 15 ರೊಳಗೆ ಕಾರ್ಯ ಸಾಧು ವರದಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ನಗರದ ಹೊರವಲಯದಲ್ಲಿ ಗೊರಗುಂಟೆಪಾಳ್ಯದಿಂದ ಕೆ.ಆರ್.ಪುರಂ, ಸಿಲ್ಕ್ಬೋರ್ಡ್, ಮೈಸೂರು ರಸ್ತೆವರೆಗೂ ಸಂಚಾರ ದಟ್ಟಣೆಯ ರಸ್ತೆಗಳನ್ನು ಗುರುತಿಸಲಾಗಿದೆ. ಇದರಲ್ಲಿ ಆದ್ಯತೆ ಮೇರೆಗೆ ಆಯ್ಕೆ ಮಾಡಿಕೊಂಡು ಕಾಮಗಾರಿ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ತುಮಕೂರು, ಕೆ.ಆರ್.ಪುರಂ, ಹೊಸೂರು, ಮೈಸೂರು ರಸ್ತೆಗಳಿಂದ ವಾಹನಗಳು ಬೆಂಗಳೂರಿಗೆ ಬರುತ್ತಿವೆ. ಸಂಚಾರದಟ್ಟಣೆ ಹೆಚ್ಚಾಗಲಿರುವ ಕಾರಣ. ಹೀಗಾಗಿ ಕೇಂದ್ರ ಸರ್ಕಾರದ ಸಹಭಾಗಿತ್ವ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಕೈಗೆತ್ತಿಕೊಳ್ಳುವ ಯೋಜನೆಗಳ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚೆ ಮಾಡಿದ ವೇಳೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಎಲ್ಲಾ ಕಡೆ ಸಂಚಾರ ನಿಯಂತ್ರಣ ಮಾಡುವುದು ಅಸಾಧ್ಯ. ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಕ್ರಮ ತೆಗೆದುಕೊಳ್ಳಬೇಕು. ಶೀಘ್ರದಲ್ಲಿ 432 ಕೋಟಿ ಬಿಬಿಎಂಪಿ ಕಾಮಗಾರಿ ಬಿಲ್ ಬಿಡುಗಡೆ ಮಾಡುತ್ತೇವೆ. ಕಾಮಗಾರಿ ಬೇಗ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ
ಮತ್ತೆ ಮಳೆ ಸುರಿಯುವ ಸಾದ್ಯತೆ ಇರುವ ಹಿನ್ನೆಲೆಯಲ್ಲಿ ಶೀಘ್ರ ಕಾಮಗಾರಿಗಳನ್ನು ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ . ಶೇಕಡ 50ರಷ್ಟು ಸರ್ಕಾರದ ಬಿಲ್ಗಳು ಬಾಕಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಬ್ಬನ್ ಪಾರ್ಕ್ನಲ್ಲಿ ಕೆಲಸ ಮಾಡಲು ಹೋದರೆ ಗಲಾಟೆ ಮಾಡುತ್ತಾರೆ. ಗಾಲ್-ಟರ್ಫ್ ಕ್ಲಬ್ಗಳಲ್ಲಿ ಅಥವಾ ಅರಮನೆ ಮೈದಾನದಲ್ಲಿ ಜಾಗ ಇದೆ. ಆದರೆ, ಈ ಮೂರು ಜಾಗಗಳನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕಾರ ಅವಧಿಯಲ್ಲಿ ಬೋಗ್ಯಕ್ಕೆ ನೀಡಲಾಗಿದೆ. ಅವರನ್ನು ಹೇಗೆ ಎತ್ತಂಗಡಿ ಮಾಡಬೇಕು ಎಂಬುದು ಚರ್ಚೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಟರ್ಫ್ ಕ್ಲಬ್ನವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮುಖ್ಯಮಂತ್ರಿಯೊಂದಿಗಿನ ಸಭೆಯಲ್ಲಿ ಸ್ಥಳಾಂತರ ಮಾಡಿಕೊಳ್ಳುವುದಾಗಿಯೂ ಭರವಸೆ ನೀಡಿದ್ದಾರೆ. ಅವರಿಗೆ ನಗರದಿಂದ ಹೊರ ಹೋಗುವಂತೆ ಸಲಹೆ ನೀಡಿದ್ದೇವೆ. ಅರಮನೆ ಮೈದಾನಕ್ಕೆ ಸಂಬಂಧಪಟ್ಟಂತೆ ಹಿಂದೆ ರಸ್ತೆ ಅಗಲೀಕರಣಕ್ಕೆ ಒಪ್ಪಿಕೊಂಡಿದ್ದರು. ಆದರೆ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ ಎಂದು ಹೇಳಿದ್ದಾರೆ.
ಬಿಬಿಎಂಪಿಯ ವ್ಯಾಪ್ತಿಯಲ್ಲಿ ಆದಾಯ ಕ್ರೂಢಿಕರಿಸಲು ತೆರಿಗೆ ಪದ್ಧತಿ ಪರಿಷ್ಕರಣೆ ಮಾಡಲು ಚಿಂತನೆ ನಡೆದಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಹೇಳಿದ್ದಾರೆ.
ಬಿಬಿಎಂಪಿಯಲ್ಲಿ ವಿವಿಧ ತೆರಿಗೆ ಸಂಗ್ರಹವಾಗುತ್ತಿರುವ ಬಗ್ಗೆ ಸಮಾಧಾನ ಇಲ್ಲ. ತೆರಿಗೆ ಸಂಗ್ರಹವಾಗುತ್ತಿರುವುದು ಕೇವಲ 3 ಸಾವಿರ ಕೋಟಿ ರೂ.ಗಳು ಮಾತ್ರ. ಇಷ್ಟು ಹಣದಲ್ಲಿ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ತೆರಿಗೆ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ ಎಂದು ತಿಳಿಸಿದ್ದಾರೆ.
ಸ್ವಯಂ ಘೋಷಿತ ತೆರಿಗೆ ಪದ್ಧತಿಯಲ್ಲಿ ಜನ ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುತ್ತಿಲ್ಲ. ಪ್ಲಾನ್ ಅಪ್ರೂವಲ್ ಪಡೆದಿರುವ ನಿರ್ಮಾಣಕ್ಕೆ ಮಾತ್ರ ತೆರಿಗೆ ಸಂಗ್ರಹವಾಗುತ್ತಿದೆ. ಹೆಚ್ಚುವರಿ ನಿರ್ಮಾಣಗಳು ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿವೆ. ವಾಣಿಜ್ಯ ಕಟ್ಟಡಗಳಲ್ಲೂ ಜನವಸತಿ ತೆರಿಗೆ ಸಂಗ್ರಹಿಸಲಾಗುತ್ತಿದೆ. ಹೀಗಾಗಿ ಪ್ರತಿ ಮನೆ ತೆರಿಗೆ ಪುನರ್ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ಧಾರೆ.