ಸುದ್ದಿಮೂಲ ವಾರ್ತೆ
ಮೈಸೂರು, ಅ.7: ಬಸವಾದಿ ಶರಣರು ಮೇಲ್ವರ್ಗದವರ ಪರವಾಗಿ ಕೆಲಸ ಮಾಡಲಿಲ್ಲ. ಶೂದ್ರ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿದರು. ತಳ ಸಮುದಾಯದ ಅಲ್ಲಮಪ್ರಭು ಅನುಭವ ಮಂಟಪದ ಅಧ್ಯಕ್ಷರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ಕಲಾಮಂದಿರದಲ್ಲಿ ಶನಿವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ-ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಬಸವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು 12 ನೇ ಶತಮಾನದಲ್ಲೇ ಜಾರಿಗೆ ತಂದವರು ಬಸವಾದಿ ಶರಣರು. ಆ ಕಾಲದಲ್ಲೇ ಅಂತರ್ಜಾತಿ ವಿವಾಹ ಮಾಡಿಸಿದವರು ಬಸವಣ್ಣ. ಈ ಕಾರಣಕ್ಕೇ ಬಸವಣ್ಣನವರ ವಿರುದ್ಧ ಬಿಜ್ಜಳನನ್ನು ಎತ್ತಿಕಟ್ಟಿದರು. ಒಬ್ಬರ ತಲೆ ಮೇಲೆ ಒಬ್ಬರು ಕೂರುವ ವ್ಯವಸ್ಥೆ ಅಳಿಸಿ-ಒಬ್ಬರ ಪಕ್ಕ ಒಬ್ಬರು ಜತೆಯಲ್ಲಿ ಕೂರುವ ಸಮಾಜ ನಿರ್ಮಾಣ ಬಸವಾದಿ ಶರಣರ ಆಶಯವಾಗಿತ್ತು ಎಂದು ವಿಶ್ಲೇಷಿಸಿದರು.
ಜನರ ಭಾಷೆಯಲ್ಲೇ ಸಾಹಿತ್ಯ ರಚಸಿದ್ದು ಬಸವಾದಿ ಶರಣರು ಮಾಡಿದ ಬಹಳ ದೊಡ್ಡ ಕ್ರಾಂತಿ. ಸಂಸ್ಕೃತದಲ್ಲಿ ಸಾಹಿತ್ಯ ರಚಿಸಿದರೆ ಜನರಿಗೆ ಅರ್ಥ ಆಗುತ್ತದಾ ? ಯಾರಿಗೂ ಅರ್ಥ ಆಗುವುದಿಲ್ಲ ಎನ್ನುವ ಕಾರಣಕ್ಕೇ ಜನರ ಭಾಷೆಯಲ್ಲಿ ಅತ್ಯುನ್ನತ ಕನ್ನಡದಲ್ಲಿ ಶರಣ ಸಾಹಿತ್ಯ ರಚನೆಯಾಯಿತು ಎಂದರು.
ಬಸವಾದಿ ಶರಣರು 12ನೇ ಶತಮಾನದಲ್ಲೇ ಜಡ್ಡುಗಟ್ಟಿದ ಜಾತಿ ಸಮಾಜಕ್ಕೆ ಚಲನೆ ನೀಡಿದರು. ಜಾತಿ ರಹಿತ ಸಮಾಜ, ಮೌಡ್ಯಗಳನ್ನು ಕಿತ್ತೆಸೆದು ಕಂದಾಚಾರಗಳಿಲ್ಲದ ಸಮಾಜ ನಿರ್ಮಾಣಕ್ಕೆ ಮುಂದಾದರು. ಸಮಾಜ ಜಾತಿ ಆಧಾರದಲ್ಲಿ ವಿಭಜನೆ ಆಗಬಾರದು. ಕುವೆಂಪು ಅವರು, “ಹುಟ್ಟುತ್ತಾ ಎಲ್ಲರೂ ವಿಶ್ವ ಮಾನವರು. ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ” ಎಂದಿದ್ದರು. ನಾವು ಹಾಗಾಗಬಾರದು. ಶ್ರೇಣೀಕೃತ ಸಮಾಜ ಹೋಗಬೇಕು ಎಂದು ಅಭಿಪ್ರಾಯಪಟ್ಟರು.
ಬೇಡಿಕೆಗಳನ್ನು ಪರಿಗಣಿಸಲಾಗುವುದು
ವೀರಶೈವ-ಲಿಂಗಾಯತ ಸಮುದಾಯ ಈ ಕಾರ್ಯಕ್ರಮದಲ್ಲಿ ಮುಂದಿಟ್ಟಿರುವ ಬೇಡಿಕೆಗಳನ್ನು ಮುಂದಿನ ಬಜೆಟ್ ನಲ್ಲಿ ಗಣನೀಯವಾಗಿ ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಮಕ್ಕಳಿಗೆ ವಚನ ಸಾಹಿತ್ಯ ಬೋಧಿಸಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ, ಜಾತಿರಹಿತ ಸಮಾಜದ ಕಲ್ಪನೆಯನ್ನು ಬಸವಣ್ಣನವರು ಹೊಂದಿದ್ದರು. ಆದರೆ ಇಂದಿಗೂ ಅದು ಸಾಕಾರವಾಗಿಲ್ಲ. ಮಾತೆಯರು ತಮ್ಮ ಮಕ್ಕಳಿಗೆ ವಚನ ಸಾಹಿತ್ಯ ಬೋಧಿಸಿದರೆ, ಅವರು ಸಂಸ್ಕಾರವಂತರಾಗಿ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದು ವ್ಯಾಖ್ಯಾನ ಮಾಡಿದರು.
ಇಂದು ಯುವಜನತೆ ಮಾದಕ ವಸ್ತುಗಳಿಗೆ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ದಾಸರಾಗುತ್ತಿದ್ದು, ಮಕ್ಕಳಲ್ಲಿ ಸದ್ಗುಣ ಬೆಳೆಯಲು ಅವರಿಗೆ ಬಾಲ್ಯದಿಂದಲೇ ವಚನ ಸಾಹಿತ್ಯ ಕಲಿಸಬೇಕು.ಬಸವಾದಿ ಪ್ರಮಥರು ಈ ಜಗತ್ತಿಗೆ ನೀಡಿರುವ ಕೊಡುಗೆ ಅನುಪಮವಾಗಿದೆ. ಕಾರ್ಲ್ ಮಾರ್ಕ್ಸ್ ನ ʻದಾಸ್ ಕ್ಯಾಪಿಟಲ್ʼ ಕೃತಿ ಬರುವ ಮೊದಲೆ ದುಡಿಮೆಗೆ ಬೆಲೆ ನೀಡಿ, ಜಾತ್ಯತೀತ ಸಮ ಸಮಾಜದ ಕಲ್ಪನೆಯನ್ನು ನೀಡಿದವರು ಬಸವಾದಿ ಪ್ರಮಥರು ಎಂದು ಹೇಳಿದರು.
ಈ ಸಮಾಜಕ್ಕೆ ವೀರಶೈವ ಲಿಂಗಾಯತ ಮಠ ಮಾನ್ಯಗಳು ನೀಡಿರುವ ಕೊಡುಗೆ ಅಪಾರವಾದ್ದು, ಎಲ್ಲ ಜಾತಿ, ಜನಾಂಗ, ಧರ್ಮದವರಿಗೆ ಯಾವುದೇ ಭೇದವಿಲ್ಲದೆ, ಅನ್ನ, ಅಕ್ಷರ ಮತ್ತು ಜ್ಞಾನ ದಾಸೋಹ ಮಾಡುತ್ತಿರುವ ನಮ್ಮ ಮಠಗಳು ಜಗತ್ತಿಗೆ ಆದರ್ಶಪ್ರಾಯವಾಗಿವೆ ಎಂದರು.
ಕೃತಿ ಬಿಡುಗಡೆ:
ʻ12ನೇ ಶತಮಾನದ ಶರಣ ದಂಪತಿಗಳು” ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶರಣ ಸಂಸ್ಕೃತಿಯನ್ನು ತಮ್ಮ ಬದುಕಿನ ಆಚರಣೆಯನ್ನಾಗಿಸಿಕೊಂಡಿದ್ದಾರೆ ಎಂದು ಕೊಂಡಾಡಿದರು.
ಈ ಕಾರಣಕ್ಕೆ ಸಿದ್ದರಾಮಯ್ಯನವರು ಬಸವ ಜಯಂತಿಯ ದಿನವನ್ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಆಯ್ಕೆ ಮಾಡಿಕೊಂಡರು. ಸಿಎಂ ಆದ ಬಳಿಕ ಮೊದಲಿಗೆ ಸಹಿ ಹಾಕಿದ್ದು ದಾಸೋಹ ಸಂಸ್ಕೃತಿಯ ಅನ್ನ ಭಾಗ್ಯ ಯೋಜನೆಗೆ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋವನ್ನು ಕಡ್ಡಾಯಗೊಳಿಸಿದ್ದು ಸಿದ್ದರಾಮಯ್ಯ ಅವರು ಎಂದು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಬಸವೇಶ್ವರ ಪುತ್ಥಳಿ ದಾನ ಮಾಡಿದ ನೈಸ್ ಸಂಸ್ಥೆಯ ಮುಖ್ಯಸ್ಥರಾದ ಅಶೋಕ್ ಖೇಣಿ, ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ದರ್ಶನ್ ಧೃವನಾರಾಯಣ್, ಜಿ.ಡಿ.ಹರೀಶ್ ಗೌಡ, ಎಚ್.ಎಂ.ಗಣೇಶ್ ಪ್ರಸಾದ್, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಡಿ.ತಿಮ್ಮಯ್ಯ ಸೇರಿ ಮಾಜಿಶಾಸಕರು ಹಾಗೂ ನಾಯಕರು ಇದ್ದರು.