ಸುದ್ದಿಮೂಲ ವಾರ್ತೆ
ತುಮಕೂರು, ಅ. 07 : ಕಳೆದ ಸೆ. 15 ರಿಂದ ಅ. 2 ರವರೆಗೆ ಜಿಲ್ಲೆಯ 330 ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತೆಯೇ ಸೇವೆ ವಿಶೇಷ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ತಿಳಿಸಿದ್ದಾರೆ.
ಮಹಾತ್ಮ ಗಾಂಧೀಜಿಯವರ ಜನ್ಮದಿನದ ಸ್ಮರಣಾರ್ಥ ಕೇಂದ್ರ ಸರ್ಕಾರದ ನಿರ್ದೇಶನದಂತೆ ಸ್ವಚ್ಛತೆಯೇ ಸೇವೆ ವಿಶೇಷ ಆಂದೋಲನ ಕಾರ್ಯಕ್ರಮದಡಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 4000ಕ್ಕೂ ಹೆಚ್ಚು ವಿವಿಧ ಸ್ವಚ್ಛತಾ ಚಟುವಟಿಕೆಗಳನ್ನು ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸಲಾಗಿದೆ.
“ಸ್ವಚ್ಛತೆಯೇ ದೈವತ್ವ” ಎಂಬ ಮಹಾತ್ಮ ಗಾಂಧೀಜಿಯವರ ಪರಿಕಲ್ಪನೆಯನ್ನು ಸಾಕಾರಗೊಳಿಸಿ ‘ಸ್ವಚ್ಛ ಭಾರತ’ವನ್ನಾಗಿ ನಿರ್ಮಿಸಬೇಕೆಂಬ ಮಹದಾಸೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತೆಯೇ ಸೇವೆ ವಿಶೇಷ ಆಂದೋಲನ ಕಾರ್ಯಕ್ರಮ ಯಶಸ್ವಿಯಾಗಿದೆ.
ಜಿಲ್ಲೆಯ 330 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 227 ಕಲ್ಯಾಣಿ, ಬಾವಿ, 624 ದೇವಾಲಯ, 193 ಬಸ್ ನಿಲ್ದಾಣ, 786 ಶಾಲೆ ಮತ್ತು ಅಂಗನವಾಡಿ, 274 ಮಾರುಕಟ್ಟೆ, 1803 ಗ್ರಾಮ ಪಂಚಾಯತಿ ಕಚೇರಿ,
ಪ್ರಾಥಮಿಕ ಆರೋಗ್ಯ ಕೇಂದ್ರ ಮುಖ್ಯ ರಸ್ತೆಗಳನ್ನು ಸ್ವಚ್ಛಗೊಳಿಸಲಾಗಿದೆ. ಅಲ್ಲದೆ 367 ಸ್ವಚ್ಛತೆ ಕುರಿತು ಶಾಲಾ ಮಕ್ಕಳಿಂದ ಜಾಗೃತಿ ಜಾಥಾ, 1123 ಸಸಿ ನೆಡುವುದು ಸೇರಿದಂತೆ 4237 ಸ್ವಚ್ಛತಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.
ಸ್ವಚ್ಛತೆಯಿದ್ದಲ್ಲಿ ಮಾತ್ರ ಆರೋಗ್ಯ ಸಾಧ್ಯ. ಮಕ್ಕಳಲ್ಲಿ ಸ್ವಚ್ಛತೆ ಪ್ರಜ್ಞೆ ಮೂಡಿಸುವ ಸಲುವಾಗಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಗೋಡೆ ಬರಹ ಮತ್ತು ರಸ್ತೆ ಸ್ವಚ್ಛತೆ ಮಾಡುವುದರೊಂದಿಗೆ ಸ್ವಚ್ಛ ತುಮಕೂರು ಸಂದೇಶವನ್ನು ಸಾರುವ ಮಾನವ ಸರಪಳಿಯನ್ನು
ನಿರ್ಮಿಸಲಾಗಿತ್ತು. ಹಾಗೆಯೇ, ವಿವಿಧೆಡೆ ನಡೆದ ಸ್ವಚ್ಚತಾ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಗಾಂಧಿ ಜಯಂತಿ ಪ್ರಯುಕ್ತ ಅ.2ರಂದು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಗಾಂಧಿಭವನದ ಮುಂದೆ ಬಾಪೂಜಿಯವರ ಪ್ರತಿಮೆ ಅನಾವರಣ ಸೇರಿ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಗಳು ಘನ ತ್ಯಾಜ್ಯ ವಸ್ತುಗಳಿಂದ ವಿನ್ಯಾಸ ಮಾಡಿದ
ಉಡುಗೆ ತೊಟ್ಟು ಪ್ರದರ್ಶಿಸಿದ ರ್ಯಾಂಪ್ ವಾಕ್ ವಿಶೇಷವಾಗಿತ್ತು ಎಂದು ಅಶ್ವಿಜಾ ತಿಳಿಸಿದ್ದಾರೆ.