ಬೆಂಗಳೂರು, ಅ.07 : ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮದ ಭಾಗವಾಗಿ ಮೂರನೇ ಸುತ್ತಿನ ಲಸಿಕಾಕರಣ ಅ. 9 ರಿಂದ 15 ರವರಿಗೆ ನಡೆಯಲಿದ್ದು, ಜಿಲ್ಲೆಯಲ್ಲಿ ಶೇಕಡ 100 ರಷ್ಟು ಗುರಿ ತಲುಪಲು ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಶಿವಶಂಕರ ಎನ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಂ. ಗ್ರಾ. ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಮಿಷನ್ ಇಂದ್ರಧನುಷ್ 5.0 ಮೂರನೇ ಸುತ್ತಿನ ಲಸಿಕಾಕರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2023 ರ ಮಿಷನ್ ಇಂದ್ರಧನುಷ್ 5.0 ಎರಡನೇ ಸುತ್ತಿನ ಲಸಿಕಾಕರಣ ಪ್ರಗತಿ ಪರಿಶೀಲನೆ ನಡೆಸಿದ ಅವರು ಯು.ವಿನ್ ತಂತ್ರಾಂಶದ ವರದಿಯಂತೆ ಸೆಪ್ಟೆಂಬರ್ 11 ರಿಂದ 16 ರವರೆಗೆ ನಡೆದ ಎರಡನೇ ಸುತ್ತಿನ ಲಸಿಕಾಕರಣದಲ್ಲಿ ಜಿಲ್ಲೆಯಲ್ಲಿ ಐದು ವರ್ಷದ ಒಳಗಿನ 2340 ಮಕ್ಕಳಿಗೆ ಹಾಗೂ 644 ಗರ್ಭಿಣಿ ಮಹಿಳೆಯರಿಗೆ ಲಸಿಕೆಯನ್ನು ನೀಡಲಾಗಿದೆ. ಎರಡನೇ ಸುತ್ತಿನಲ್ಲಿ ಶೇಕಡ 100 ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಲಾಗಿದೆ ಎಂದರು.
2023 ರ ಮಿಷನ್ ಇಂದ್ರಧನುಷ್ 5.0 ಮೂರನೇ ಸುತ್ತಿನಲ್ಲಿ ಲಸಿಕಾಕರಣ ಕ್ಯಾಂಪ್ ಮಾಡುವ ಮುಂಚಿತವಾಗಿ ಹೆಚ್ಚು ಪ್ರಚಾರ ಮಾಡಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡುವ ದಿನಾಂಕವನ್ನು ತಿಳಿಸಬೇಕು. ವಲಸೆ ಪ್ರದೇಶಗಳಲ್ಲಿ, ನಗರದ ಸ್ಲಂ ಪ್ರದೇಶದಲ್ಲಿ ಹೆಚ್ಚು ಗಮನ ಹರಿಸಿ ಲಸಿಕಾಕರಣ ಮಾಡಬೇಕು. ಮೊದಲ ಹಾಗೂ ಎರಡನೇ ಸುತ್ತಿನಲ್ಲಿ ಲಸಿಕೆ ಪಡೆಯದ 5 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರಿಗೆ ಮೂರನೇ ಸುತ್ತಿನಲ್ಲಿ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಲು ಕ್ರಮ ವಹಿಸಿ, ಶೇಕಡ 100 ರಷ್ಟು ಪ್ರಗತಿ ಸಾಧಿಸಿ ಮಿಷನ್ ಇಂದ್ರಧನುಷ್ 5.0 ಅಭಿಯಾನವನ್ನು ಯಶಸ್ವಿಗೊಳಿಸಿ ಎಂದು ಹೇಳಿದರು.
ಈ ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನಿಲ್ ಕುಮಾರ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಸೀಮಾ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.