ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.8:ಗೋವಿಂದರಾಜ ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಯಕ ಯೋಗಿ, ಜಗಜ್ಯೋತಿ ಬಸವಣ್ಣ ಅವರ ಪುತ್ಥಳಿ ಸ್ಥಾಪಿಸಲು ಅಗತ್ಯ ನೆರವು ನೀಡಲಾಗುವುದು ಎಂದು ಕ್ಷೇತ್ರದ ಶಾಸಕ ಪ್ರಿಯಕೃಷ್ಣ ಶನಿವಾರ ಹೇಳಿದ್ದಾರೆ.
ವಿಜಯನಗರದ ಪಾಲಿಕೆ ಸೌಧದ ಡಾ.ಎಂ.ಚಿದಾನಂದ ಮೂರ್ತಿ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಬಸವತತ್ವ ಪರಿಷತ್ತು ವತಿಯಿಂದ ನಡೆದ 67ನೇ ತಿಂಗಳ ಶರಣ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಭಾಗದಲ್ಲಿ ಅನೇಕ ಮಹನಿಯರ ಪುತ್ಥಳಿ ಗಳನ್ನು ಸ್ಥಾಪಿಸಲು ಅಗತ್ಯವಾದ ಎಲ್ಲಾ ನೆರವು ಮತ್ತು ಸಹಕಾರ ನೀಡಿದ್ದೇವೆ. ಮಹಾನ್ ದಾರ್ಶನಿಕರಾದ ಬಸವೇಶ್ವರರ ಪುತ್ಥಳಿ ಅನಾವರಣಕ್ಕೂ ಅವಕಾಶ ಕಲ್ಪಿಸುತ್ತೇವೆ ತಮ್ಮ ತಂದೆ ವಿಜಯನಗರ ಶಾಸಕ ಕೃಷ್ಣಪ್ಪ ಹಾಗೂ ತಮ್ಮ ಪರವಾಗಿ ವಾಗ್ದಾನ ನೀಡಿದರು.
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿ, ನಂತರ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ ಪರಿಷತ್ತಿನ ರಾಜ್ಯಾಧ್ಯಕ್ಷ ಡಿ.ಟಿ.ಅರುಣ್ ಕುಮಾರ್ ಪ್ರತಿ ತಿಂಗಳು ಹಮ್ಮಿಕೊಂಡು ಬರುತ್ತಿರುವ ಶರಣ ಸಂಗಮ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಥಣಿ ಗಚ್ಚಿನ ಮಠದ ಶಿವ ಬಸವಸ್ವಾಮೀಜಿ ಅವರು, ಪರಿಷತ್ತಿನ ಪರವಾಗಿ ಬಸವೇಶ್ವರ ಪುತ್ಥಳಿ ಸ್ಥಾಪನೆ ಹಾಗೂ ವಿಜಯನಗರ ಮೆಟ್ರೋ ನಿಲ್ದಾಣಕ್ಕೆ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹೆಸರಿಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ‘ಸಮಾನತೆಯ ಹರಿಕಾರ ಬಸವಣ್ಣ’ ವಿಷಯ ಕುರಿತು ಮಾತನಾಡಿದ ಬೆಂಗಳೂರಿನ ಮಾರತ್ ಹಳ್ಳಿ ಭಾಗದ ಎಸಿಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಅವರು, ಬಸವತತ್ವ ಕೊರಳಿನ ಧರ್ಮವಲ್ಲ, ಕರುಳಿನ ಧರ್ಮ. ಪೋಷಕರು ತಮ್ಮ ಮಕ್ಕಳಿಗೆ ಮನೆಯಿಂದಲೇ ಹೆಣ್ಣು-ಗಂಡು ಎಂಬ ಬೇಧವಿಲ್ಲದೆ ಸಮಾನತೆಯ ಅಭ್ಯಾಸ ಮಾಡಿಸಬೇಕು ಎಂದು ಬಸವತತ್ವದ ಮಹತ್ವವನ್ನು ವಚನಗಳ ಉಲ್ಲೇಖ ದೊಂದಿಗೆ ಕಿಕ್ಕಿರಿದು ತುಂಬಿದ್ದ ಸಭಿಕರ ಮುಂದೆ ಎಳೆಎಳೆಯಾಗಿ ತೆರೆದಿಟ್ಟರು.
ಸಮಾರಂಭದಲ್ಲಿ ವೇದಿಕೆ ಮೇಲಿದ್ದ ಎಸಿಪಿ ಪ್ರಿಯದರ್ಶಿನಿ ಮತ್ತು ಅರುಣ್ ಕುಮಾರ್ ಅವರ ಮಾತೃಶ್ರೀ ಅವರು ಸೇರಿದಂತೆ ಅತಿಥಿಗಳನ್ನು ಸನ್ಮಾನಿಸಲಾಯಿತು. ಪ್ರೇಮಶಾಂತವೀರಯ್ಯ ಮತ್ತು ತಂಡದಿಂದ ವಚನ ಗಾಯನ ಸಭಿಕರ ಮನ ಸೆಳೆಯಿತು.