ಸುದ್ದಿಮೂಲ ವಾರ್ತೆ
ಮೈಸೂರು, ಅ.8: ಆಶ್ರಮಶಾಲೆಯ ಮಕ್ಕಳಿಗೂ ಕ್ಷೀರಭಾಗ್ಯ ಯೋಜನೆಯನ್ನು ವಿಸ್ತರಿಸಿಕೊಡಿ ಹಾಗೂ ಸರ್ಕಾರಿ ಸಮಾರಂಭಗಳಿಗೆ ನಂದಿನಿ ಉತ್ಪನ್ನಗಳನ್ನು ಖರೀದಿಸುವಂತೆ ಆದೇಶ ನೀಡಬೇಕೆಂದು ಮೈಮುಲ್ ಅಧ್ಯಕ್ಷ ಪ್ರಸನ್ನಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ ಮಾಡಿದರು.
ಮೈಸೂರಿನ ಮುಖ್ಯಮಂತ್ರಿಗಳ ನಿವಾಸದಲ್ಲಿ ಮೈಮುಲ್ ನಿರ್ದೇಶಕ ಬಿ. ಗುರುಸ್ವಾಮಿ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಮೈಮುಲ್ಗೆ ಬರುವ ಆದಾಯ ಕಡಿಮೆಯಾಗಿದ್ದು, ರೈತರಿಗೆ ಕೊಡುವ ಹಣದಲ್ಲಿಒಂದು ರೂಪಾಯಿಯನ್ನು ಕಡಿಮೆ ಮಾಡಿಸಿಕೊಡಿಸಬೇಕು ಎಂದಾಗ ಮುಖ್ಯಮಂತ್ರಿಗಳು ಮಾತನಾಡಿ ನಿಮ್ಮಲ್ಲಿ ಹೊರಗುತ್ತಿಗೆ ಕೆಲಸದವರನ್ನು ಹೆಚ್ಚಾಗಿ ತೆಗೆದುಕೊಂಡಿರುವುದರಿಂದ ರೈತರಿಗೆ ತೊಂದರೆಯಾಗುತ್ತದೆ. ರೈತರಿಗೆ ಕೊಡುವ ಹಣವನ್ನು ನಿಲ್ಲಿಸಲು ಆಗುವುದಿಲ್ಲ ಇದಕ್ಕೆ ಸಂಬಂಧಿಸಿದಂತೆ ಕೆ.ಎಂ.ಎಫ್. ನವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು.
ರಾಜ್ಯದ ಎಲ್ಲಾ ಆಶ್ರಮಶಾಲೆ ಮಕ್ಕಳಿಗೆ ಏಕೆ ಹಾಲು ಕೊಡುತ್ತಿಲ್ಲ ಎಂದು ವಿಚಾರಿಸಲಾಗುವುದು. ಮೈಸೂರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಜಿಲ್ಲೆಯ ಆಶ್ರಮ ಶಾಲೆಯ ಮಕ್ಕಳಿಗೆ ಹಾಲು ಕೊಡಲು ಕ್ರಮಕೈಗೊಳ್ಳಬೇಕೆಂದು ಸೂಚಿಸಿದ ಸಿಎಂ, ಮೈಮುಲ್ಗೆ ಸಂಬಂಧಿಸಿದಂತೆ ಹಾಗೂ ಬೇರೆ ಬೇರೆ ಡೈರಿಗಳಿಗೆ ಸಂಬಂಧಿಸಿದಂತೆ ಹಾಲಿನ ದರಗಳ ಬಗ್ಗೆ ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್. ವಿಜಯ ಕುಮಾರ್ ರವರಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಡಿ. ರವಿಶಂಕರ್, ಕೆ. ಹರೀಶ್ಗೌಡ, ಮೈಮುಲ್ ಅಧ್ಯಕ್ಷ ಪ್ರಸನ್ನಕುಮಾರ್, ನಿದೇಶಕರಾದ ಬಿ. ಗುರುಸ್ವಾಮಿ, ಕೆ.ಜಿ. ಮಹೇಶ್, ಎ.ಟಿ. ಸೋಮಶೇಖರ್, ಉಮಾಶಂಕರ್, ಕುಮಾರ್, ಈರೇಗೌಡ, ದಾಕ್ಷಾಯಿಣಿ, ಲೀಲಾನಾಗರಾಜು, ಚೆಲುವರಾಜು, ಓಂ ಪ್ರಕಾಶ್, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಗಳಾದ ಎಂ. ರಾಮಯ್ಯ, ಬಿ. ಶಿವಸ್ವಾಮಿ, ಕೆ.ಎನ್.ವಿಜಯ್ ಹಾಜರಿದ್ದರು.