ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.9: ನವೆಂಬರ್ 14 ರಿಂದ 20ರವರೆಗೆ ಸಹಕಾರ ಇಲಾಖೆ ವತಿಯಿಂದ 70ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.
ಇಂದು ವಿಕಾಸಸೌಧದ ಸಮ್ಮೇಳನ ಸಭಾಂಗಣದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನ.14 ರಂದು ಸಹಕಾರ ಸಂಘ ಸಂಸ್ಥೆಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು, ನವೆಂಬರ್ 15ರಂದು ಸಾಲೇತರ ಸಹಕಾರ ಸಂಘಗಳ ಪುನ:ಶ್ಚೇತನ ಹಾಗೂ ಆರ್ಥಿಕ ಸೇರ್ಪಡೆ, ನವೆಂಬರ್ 16ರಂದು ಸಹಕಾರ ಸಂಸ್ಥೆಗಳನ್ನು ಡಿಜಿಟಲೀಕರಣಗೊಳಿಸಲು ತಾಂತ್ರಿಕತೆಯ ಅಳವಡಿಕೆ ಮತ್ತು ಉನ್ನತೀಕರಣ, ನವೆಂಬರ್ 17 ರಂದು ಸಹಕಾರ ಸಂಸ್ಥೆಗಳಲ್ಲಿ ಸರಳ ವ್ಯಾಪಾರ ಪ್ರಕ್ರಿಯೆ ಮತ್ತು ಉದಯೋನ್ಮುಖ ವಲಯಗಳು, ನವೆಂಬರ್ 18 ರಂದು ಸಾರ್ವಜನಿಕ-ಖಾಸಗಿ-ಸಹಕಾರಿ ಸಹಭಾಗಿತ್ವವನ್ನು ಬಲಪಡಿಸುವುದು. ನವೆಂಬರ್ 19 ರಂದು ಮಹಿಳೆಯರು, ಯುವಜನ ಮತ್ತು ಅಬಲವರ್ಗಕ್ಕೆ ಸಹಕಾರ ಸಂಸ್ಥೆಗಳು ಮತ್ತು ನವೆಂಬರ್ 20ರಂದು ಸಹಕಾರ ಶಿಕ್ಷಣ ತರಬೇತಿ ಪರಿಷ್ಕರಣೆ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಲು ಯೋಜನೆಯನ್ನು ರೂಪಿಸಲು ಕ್ರಮ ವಹಿಸಲಾಗಿದ್ದು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನೇತೃತ್ವದಲ್ಲಿ ಎಲ್ಲಾ ರಾಜ್ಯ ಮಟ್ಟದ ಸಹಕಾರ ಮಹಾಮಂಡಳಗಳು, ಶೃಂಗ ಸಂಸ್ಥೆಗಳು, ಸಹಕಾರ ಇಲಾಖೆ ಮತ್ತು ಸ್ಥಳೀಯ ಸಹಕಾರಿ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ನವೆಂಬರ್ 14 ರಂದು ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಮಾರಂಭದ ಸ್ಥಳ ಇನ್ನೂ ನಿಗದಿಪಡಿಸಿರುವುದಿಲ್ಲ. ಸದ್ಯದಲ್ಲಿಯೆ ಇದರ ಬಗ್ಗೆ ಚರ್ಚಿಸಿ ಸ್ಥಳ ಹಾಗೂ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ದಪಡಿಸಲಾಗುವುದು ಎಂದು ತಿಳಿಸಿದರು.