ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.9: ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇಂದು ಮುಹೂರ್ತ ನಿಗದಿಯಾಗಿದೆ. ನವೆಂಬರ್ ತಿಂಗಳಲ್ಲಿ ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್ಗಡ ಮತ್ತು ಮಿಜೋರಾಮ್ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ನವದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಮಾಧ್ಯಮಗೋಷ್ಠಿ ನಡೆಸಿ ಐದು ರಾಜ್ಯಗಳ ಚುನಾವಣೆ ದಿನಾಂಕವನ್ನು ಪ್ರಕಟಿಸಿದರು.
ಮಿಜೋರಾಂನಲ್ಲಿ ನ.7ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ನಕ್ಸಲ್ಪೀಡಿತ ಮತ್ತು ಘಟ್ಟ ಪ್ರದೇಶಗಳೇ ಇರುವಂತಹ ಛತ್ತಿಸ್ಗಢದಲ್ಲಿ ಎರಡು ಹಂತಗಳಲ್ಲಿ ಅಂದರೆ, ನ.7 ಮತ್ತು 17ರಂದು ಮತದಾನ ನಡೆಯಲಿದೆ. ಮಧ್ಯಪ್ರದೇಶದಲ್ಲಿ ನವೆಂಬರ್ 17ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ರಾಜಸ್ಥಾನದಲ್ಲಿ ನವೆಂಬರ್ 23ರಂದು ಮತದಾನ ನಡೆಯಲಿದೆ. ತೆಲಂಗಾಣದ 119 ಕ್ಷೇತ್ರಗಳಲ್ಲಿ ನವೆಂಬರ್ 30 ರಂದು ಒಂದೇ ದಿನ ಮತದಾನ ಇರುತ್ತದೆ.
ಐದು ರಾಜ್ಯಗಳ ಮತ ಎಣಿಕೆ ಒಂದೇ ದಿನ ನಡೆಯಲಿದೆ. ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದ್ದು ಫಲಿತಾಂಶ ಘೋಷಣೆ ಮಾಡಲಾಗುತ್ತದೆ ಎಂದು ರಾಜೀವ್ ಕುಮಾರ್ ವಿವರಿಸಿದರು.
2023ರ ಡಿಸೆಂಬರ್ 17ಕ್ಕೆ ಮಿಜೋರಾಂನ ಶಾಸಕಾಂಗ ಸಭೆಯ ಅವಧಿ ಮುಕ್ತಾಯವಾಗಲಿದೆ. 2024ರ ಜನವರಿಯಲ್ಲಿ ತೆಲಂಗಾಣ, ರಾಜಸ್ಥಾನ, ಛತ್ತೀಸ್ಗಢ ಮತ್ತು ರಾಜಸ್ಥಾನ ರಾಜ್ಯಗಳ ಶಾಸಕಾಂಗ ಸಭೆಯ ಅವಧಿ ಮುಗಿಯಲಿದೆ.
ಪ್ರಸ್ತುತ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೆ, ಛತ್ತಿಸ್ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ. ತೆಲಂಗಾಣದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಮತ್ತು ಮಿಜೋರಾಮ್ನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಸರ್ಕಾರ ಆಡಳಿತ ನಡೆಸುತ್ತಿದೆ.
ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಪಂಚರಾಜ್ಯಗಳ ಚುನಾವಣೆ ಬಂದಿರುವುದು ಮಹತ್ವ ಪಡೆದುಕೊಂಡಿದೆ. ಅದರಲ್ಲೂ ಉತ್ತರ ಭಾರತದಲ್ಲಿಯೇ ಮೂರು ರಾಜ್ಯಗಳಿರುವುದು ಬಿಜೆಪಿ ಮತ್ತು ಕಾಂಗ್ರೆಸ್ಗೆ ಪ್ರತಿಷ್ಠೆಯ ಕಣವಾಗಲಿದೆ. ಲೋಕಸಭೆಯಲ್ಲಿ ಮೂರನೇ ಬಾರಿ ಆಯ್ಕೆ ಬಯಸಿರುವ ಬಿಜೆಪಿಗೆ ಈ ಚುನಾವಣೆಯ ಗೆಲುವು ಅನಿವಾರ್ಯವಾದರೆ, ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ‘ಇಂಡಿಯಾ’ ಒಕ್ಕೂಟ ಒಗ್ಗಟ್ಟಾಗಿ ಈ ರಾಜ್ಯಗಳಲ್ಲಿ ಕಣಕ್ಕಿಳಿಯುವುದು ನಿಚ್ಚಳವಾಗಿದೆ.
ಒಟ್ಟು16 ಕೋಟಿ ಮತದಾರರು
ಮಿಜೋರಾಂ, ಛತ್ತೀಸ್ಗಢ, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣದಲ್ಲಿ ನಡೆಯುವ ಚುನಾವಣೆಯಲ್ಲಿ 8.2 ಕೋಟಿ ಪುರುಷ ಮತ್ತು 7.8 ಕೋಟಿ ಮಹಿಳಾ ಮತದಾರರು ಇರಲಿದ್ದಾರೆ. ಈ ಪೈಕಿ 60.2 ಲಕ್ಷ ಮಂದಿ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ಐದು ರಾಜ್ಯಗಳಲ್ಲಿ 60.20 ಲಕ್ಷ ಹೊಸ ಮತದಾರರು ನೋಂದಣಿಯಾಗಿದ್ದಾರೆ. ಕ್ರಿಮಿನಲ್ ಇತಿಹಾಸ ಹೊಂದಿರುವ ಅಭ್ಯರ್ಥಿಗಳು ತಮ್ಮ ಇತಿಹಾಸವನ್ನು ಪತ್ರಿಕೆಗಳು, ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಮೂರು ಬಾರಿ ಪ್ರಕಟಿಸಬೇಕು. ಕ್ರಿಮಿನಲ್ ಇತಿಹಾಸ ಹೊಂದಿರುವವರಿಗೆ ಏಕೆ ಟಿಕೆಟ್ ನೀಡಲಾಗಿದೆ ಎಂಬುದನ್ನು ಪಕ್ಷಗಳು ಸಹ ವಿವರಿಸಬೇಕು’ ಎಂದು ಅವರು ಸೂಚಿಸಿದ್ದಾರೆ.
ಚುನಾವಣೆಗಳ ಮೇಲ್ವಿಚಾರಣೆಯನ್ನು ಮಾಡಲು ಐದು ವಿಧಾನಸಭಾ ಚುನಾವಣೆಗಳಿಗೆ ಚುನಾವಣಾ ಸೀಜರ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅನ್ನು ಪರಿಚಯಿಸಲಾಗುತ್ತಿದೆ. ಇದು ಐದು ರಾಜ್ಯಗಳಲ್ಲಿ ಶಾಂತಿಯುತ ವಾತಾವರಣವನ್ನು ಕಾಪಾಡುವಲ್ಲಿ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರಗಳು
ಮಧ್ಯಪ್ರದೇಶ – 230
ಛತ್ತೀಸ್ಗಢ – 90
ರಾಜಸ್ಥಾನ – 200
ತೆಲಂಗಾಣ – 119
ಮಿಜೋರಾಂ – 40
ಯಾವಾಗ ಚುನಾವಣೆ?
ಮಿಜೋರಾಂ: ನ.7
ಛತ್ತೀಸ್ಗಡ: ನ.7 ಮತ್ತು 17
ಮಧ್ಯಪ್ರದೇಶ: ನ.17
ರಾಜಸ್ಥಾನ: ನ.23
ತೆಲಂಗಾಣ: ನ.30
ಫಲಿತಾಂಶ: ಡಿ.3