ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.9: ಕೋಣನಕುಂಟೆ ಕ್ರಾಸ್ ಬಳಿ ಇತ್ತೀಚೆಗೆ ನಡೆದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯನಟ ನಾಗಭೂಷಣ್ ಸ್ಪಷ್ಟನೆ ನೀಡಿದ್ದು, ತಾವು ಹಿಟ್ ಆಂಡ್ ರನ್ ಮಾಡಿಲ್ಲ, ಸ್ಥಳದಲ್ಲಿದ್ದು ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಿದ್ದೇನೆ ಎಂದಿದ್ದಾರೆ.
ಮಲ್ಲೇಶ್ವರಂನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರು ಅಪಘಾತದ ಬಗ್ಗೆ ಈ ಮೊದಲೇ ನಾನು ಮಾತನಾಡಬೇಕಿತ್ತು. ಆದರೆ ಅದನ್ನು ಅರಗಿಸಿಕೊಳ್ಳಲು ಸಮಯ ಬೇಕಾಯಿತು. ಅದಕ್ಕಾಗಿ ಕ್ಷಮೆ ಇರಲಿ ಎಂದರು. ಅಂದು ರಾತ್ರಿ ಆರ್.ಆರ್ ನಗರದಿಂದ ಹೋಗುತ್ತಿದ್ದಾಗ ಕೋಣನಕುಂಟೆ ಕ್ರಾಸ್ ಬಳಿ ಕಾರು ಅಪಘಾತ ಆಗಿರುವುದು ನಿಜ. ಆದ ಹಿಟ್ ಆಂಡ್ ರನ್ ಮಾಡಿಲ್ಲ ಎಂದಿದ್ದಾರೆ.
ಆ ಕ್ಷಣದಲ್ಲಿ ಒಬ್ಬ ಮನುಷ್ಯನಾಗಿ ಏನು ಮಾಡಬೇಕು ಅದನ್ನು ಮಾಡಿದ್ದೇನೆ. ಎಲ್ಲಿಯೂ ಓಡಿ ಹೋಗಲಿಲ್ಲ. ಹೇಗಾದರೂ ಮಾಡಿ ಆ ಜೀವಗಳನ್ನು ಉಳಿಸಿಕೊಳ್ಳಬೇಕು ಅನ್ನೋದೆ ಇತ್ತು. ನನಗೆ ನೋವಿದೆ. ನನಗಿಂತ ಹೆಚ್ಚು ಆ ಕುಟುಂಬಕ್ಕೆ ತುಂಬಾ ನೋವಿದೆ. ನಾನು ಕೂಡ ಚಿಕ್ಕ ವಯಸ್ಸಿನಲ್ಲಿ ನನ್ನ ಅಪ್ಪನನ್ನು ಆಕ್ಸಿಡೆಂಟ್ ಅಲ್ಲೇ ಕಳೆದುಕೊಂಡಿದ್ದೇನೆ. 25 ವರ್ಷದ ಹಿಂದೆ ನನ್ನ ತಂದೆಯನ್ನು ಅಪಘಾತ ಮಾಡಿದವರು ಯಾರೆಂದು ಇವತ್ತಿಗೂ ಗೊತ್ತಿಲ್ಲ. ಹೀಗಾಗಿ ಅದರ ನೋವು ಏನೆಂಬುದು ನನಗೆ ಸಂಪೂರ್ಣ ಗೊತ್ತಿದೆ. ಘಟನಾ ಸ್ಥಳದಲ್ಲಿ ನನ್ನ ಕಾರು ಕೆಟ್ಟಿದ್ದರಿಂದ ಆಟೋ ಮೂಲಕ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಿದ್ದೇನೆ ಎಂದು ಹೇಳಿದರು.
ಕಾರಿನ ಬಂಪರ್ ಎಳೆದು ಹಾಕಿದ್ದು ನಾನೇ, ಅವರನ್ನು ಆಟೋದಲ್ಲಿ ಕೂರಿಸಿಕೊಂಡು ಅಸ್ಪತ್ರೆಗೆ ಕರೆದುಕೊಂಡು ಹೋದೆ. ಪೊಲೀಸರಿಗೂ ಫೋನ್ ಕಾಲ್ ಮಾಡಿ ಮಾಹಿತಿ ನೀಡಿರುವುದು ನಾನೇ. ಅಪಘಾತ ಮಾಡಿದ್ರೆ ದಯವಿಟ್ಟು ಯಾರು ಕೂಡ ಓಡಿ ಹೋಗಬೇಡಿ ಎಂದು ಇದೇ ವೇಳೆ ನಾಗಭೂಷಣ್ ಅವರು ಮನವಿ ಮಾಡಿದರು. ಇನ್ನು ಅಪಘಾತಕ್ಕೆ ಒಳಗಾಗಿದ್ದ ದಂಪತಿ ಕುಟುಂಬಕ್ಕೆ ಏನೇ ಸಹಾಯ ಬೇಕಾದ್ರೂ ನಾನು ಮಾಡುತ್ತೇನೆ ಎಂದು ಹೇಳಿದ್ದಾರೆ.