ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.11: ಸಮಾಜ ಮತ್ತು ಸರ್ಕಾರದ ನಡುವೆ ಮಾಧ್ಯಮಗಳು ಪ್ರಗತಿ ಮತ್ತು ಸೌಹಾರ್ದದ ಸೇತುವೆಯಾಗಬೇಕು.
ಬರವಣಿಗೆ ಜನರ ಬದುಕನ್ನು ಉನ್ನತೀಕರಿಸುವಂತಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಬಿ.ಕೆ.ರವಿ ಅವರ ಸಂಪಾದಕತ್ವದ “ಮೀಡಿಯಾ ಆಫ್ ದಿ ಮಿಲೇನಿಯಂ” ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಬಿ.ಕೆ.ರವಿ ಅವರಿಗೆ ಬರೆಯುವ ಶಕ್ತಿ ಇದೆ. ಇದುವರೆಗೂ ಒಂಬತ್ತು ಕೃತಿಗಳನ್ನು ರಚಿಸಿದ್ದಾರೆ. ಮಾಧ್ಯಮ ಸಾಕ್ಷರತೆ ಕುರಿತಾದ ಈ ಹೊಸ ಪುಸ್ತಕ ಮಾಧ್ಯಮ ಕ್ಷೇತ್ರದ ಅರಿವನ್ನು ವಿಸ್ತರಿಸಲಿ. ವೃತ್ತಿಧರ್ಮ ಕಾಪಾಡಿಕೊಂಡರೆ ಪತ್ರಿಕಾ ವೃತ್ತಿಯ ಘನತೆ ಉಳಿಯುತ್ತದೆ. ಸಂವಿಧಾನದ ಮೌಲ್ಯಗಳನ್ನು ಕಾಪಾಡಲು ಪತ್ರಕರ್ತರು ಮುಂದಾಗಬೇಕು. ಸಂವಿಧಾನ ಉಳಿದರೆ ಪತ್ರಿಕಾ ವೃತ್ತಿಯ ಸ್ವಾತಂತ್ರ್ಯವೂ ಉಳಿಯುತ್ತದೆ ಎಂದು ತಿಳಿಸಿದರು.
ಭಾರತೀಯ ಮಾಧ್ಯಮ ಮತ್ತು ಉದ್ಯಮ ಸೃಷ್ಟಿಸಿರುವ ಮತ್ತು ಎದುರಿಸುತ್ತಿರುವ ಇವತ್ತಿನ ಸಮಸ್ಯೆಗಳಿಗೆ ಮಾಧ್ಯಮ ಸಾಕ್ಷರತೆ ಪರಿಹಾರ ಆಗಬಲ್ಲದು. ಹೀಗಾಗಿ ಪದವಿ ಪೂರ್ವ ಹಂತದಿಂದಲೇ ಮಾಧ್ಯಮ ಸಾಕ್ಷರತೆಗೆ ಪೂರಕವಾದ ಪಠ್ಯಗಳನ್ನು ಅಳವಡಿಸಲು ಕ್ರಮ ವಹಿಸುವಂತೆ ಕೃತಿಯ ಸಂಪಾದಕರಾದ ಬಿ.ಕೆ.ರವಿ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಮುನ್ನುಡಿ ಹಾಡಿರುವ ಕರ್ನಾಟಕ ಮಾದರಿ ಅಭಿವೃದ್ಧಿ ಕುರಿತಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಿದ್ದಪಡಿಸಿದ್ದ ಕಿರುಚಿತ್ರವನ್ಮು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.