ಸುದ್ದಿಮೂಲ ವಾರ್ತೆ
ಮೈಸೂರು, ಅ.11:ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಅ.19 ರಂದು ಒಂದು ದಿನದ ಸಾಂಕೇತಿಕ ಹೋರಾಟವನ್ನು ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಮಾತನಾಡಿದ ಅವರು, ಅಂದು ಬೆಳಿಗ್ಗೆ 7 ರಿಂದ ಮದ್ಯಾಹ್ನ 2ವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎಸ್ಕಾಂ ಕಚೇರಿಗಳ ಮುಂದೆ ರೈತರಿಗೆ ವಿದ್ಯುತ್ ತಾರತಮ್ಯ ವಿರೋಧಿಸಿ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
ಪಡಿತರ 10 ಕೆಜಿ ಅಕ್ಕಿಯಲ್ಲಿ ಪೌಷ್ಠಿಕತೆ ಇಲ್ಲ. ಸರ್ಕಾರಕ್ಕೆ ಪೌಷ್ಠಿಕ ಆಹಾರ ಕೊಡಬೇಕು. ರೈತರನ್ನು ನೆಮ್ಮದಿಯಿಂದ ಇರಲು ಸರ್ಕಾರಗಳು ಬಿಡುತ್ತಿಲ್ಲ. ಬರ ಬರುತ್ತದೆ ಎಂದು ಮುನ್ಸೂಚನೆ ಇತ್ತು. ಆಗ ವಿದ್ಯುತ್ ತೊಂದರೆ ಆಗುತ್ತದೆ ಎಂದು ಗೊತ್ತೇ ಇದೆ. ಸರ್ಕಾರದ ಬೇಜವಾಬ್ದಾರಿಯಿಂದ ರೈತರಿಗೆ ಸಮಸ್ಯೆ ಆಗಿದೆ ಎಂದು ಖಂಡಿಸಿದರು.
ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಅಂತ ಬರೀ ಬಾಯಿಯಿಂದ ಹೇಳುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೇಜವಾಬ್ದಾರಿಯಿಂದ ರೈತರು ಸಾಯುತ್ತಿದ್ದಾರೆ. ಕಾರ್ಖಾನೆಗೆ ಬೇಕಿದ್ದರೆ ಅರ್ಧ ವಿದ್ಯುತ್ ನೀಡಿದರೂ ಪರವಾಗಿಲ್ಲ. ರೈತರ ಪಂಪಸೆಟ್ಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.