ಸುದ್ದಿಮೂಲ ವಾರ್ತೆ
ಆನೇಕಲ್, ಅ.11: ತಾಲೂಕಿನ ಅತ್ತಿಬೆಲೆ ಗಡಿಭಾಗದ ಪಟಾಕಿ ಅಂಗಡಿಯಲ್ಲಿ ನಡೆದ ಅಗ್ನಿ ದುರಂತದ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದು, ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ನಡುವೆ ಅಗ್ನಿದುರಂತದಲ್ಲಿ ಆಸ್ಪತ್ರೆ ಸೇರಿದ್ದ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹದಿನೈದಕ್ಕೆ ಏರಿಕೆಯಾಗಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ನೇತೃತ್ವದ ತಂಡ ಅಗ್ನಿ ದುರಂತ ನಡೆದ ಘಟನಾ ಸ್ಥಳಕ್ಕೆ ಭೇಡಿ ನೀಡಿ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಸಂಗ್ರಹಿಸಿದರು. ಅಗ್ನಿದುರಂತ ನಡೆದ ಸ್ಥಳದಲ್ಲಿನ ಲೋಪವನ್ನು ಕಂಡು ಕೆಂಡಾಮಂಡಲವಾಗಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿದ್ದಲ್ಲಿ ಇಂತಹ ದುರಂತ ನಡೆಯುತ್ತಿರಲಿಲ್ಲ. ಇದರಲ್ಲಿ ಅಧಿಕಾರಿಗಳ ಲೋಪ ಇರುವುದು ಎದ್ದು ಕಾಣುತ್ತಿದೆ. ಪಟಾಕಿ ಮಾರಾಟ ಮಾಡೋಕೆ ಲೈಸನ್ಸ್ ಪಡೆದು ಗೋಡೌನ್ ಮಾಡಿಕೊಂಡು ಹೆಚ್ಚಿನ ಪ್ರಮಾಣದ ಪಟಾಕಿ ಶೇಖರಣೆ ಮಾಡಿದ್ದಾರೆ. ಅಗ್ನಿ ಅನಾಹುತ ಸಂಭವಿಸಿ ಅಮಾಯಕ ಜೀವಗಳು ಹೋಗಿವೆ. ರಾಜ್ಯದಲ್ಲಿ ಇಂತಹ ಘಟನೆ ಮತ್ತೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದರು. ಕ್ತ ನ್ಯಾಯಮೂರ್ತಿ.
ಇನ್ನೂ ಲೋಕಾಯುಕ್ತ ನ್ಯಾಯಮೂರ್ತಿಗಳು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡು ಪರಿಶೀಲನೆ ನಡೆಸಿ ಹೊರಡುತ್ತಿದ್ದಂತೆ ಪಟಾಕಿ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ ನಡೆಸಿದರು. ತಹಶೀಲ್ದಾರ್ ಶಿವಪ್ಪ ಲಮಾಣಿ, ಅಡಿಷನಲ್ ಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ ರೆವಿನ್ಯೂ, ಪೊಲೀಸ್, ಪುರಸಭೆ ಮತ್ತು ಅಗ್ನಿಶಾಮಕ ಅಧಿಕಾರಿಗಳು ದಾಳಿ ನಡೆಸಿ ನಿಯಮಾವಳಿಗಳನ್ನ ಪಾಲನೆ, ಸ್ಟಾಕ್ ಮತ್ತು ನಿಷೇಧಿತ ಪಟಾಕಿಗಳ ಬಗ್ಗೆ ಪರಿಶೀಲನೆ ನಡೆಸಿ ನಿಯಮ ಉಲ್ಲಂಘಿಸಿದ ಪಟಾಕಿ ಅಂಗಡಿಗಳ ವಿದ್ಯುತ್ ಸಂಪರ್ಕ ಕಟ್ ಮಾಡಿ ಸೀಜ್ ಮಾಡಿದ್ದಾರೆ.