ಸುದ್ದಿಮೂಲ ವಾರ್ತೆ
ಮೈಸೂರು, ಆ.13:ದಸರಾ ಮಹೋತ್ಸವದ ಆಚರಣೆಯಲ್ಲಿ ಸುರಕ್ಷತೆಯ ಕಡೆಗೂ ಹೆಚ್ಚು ಗಮನ ಇರಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಶುಕ್ರವಾರ ಅರಮನೆ ಮಂಡಳಿ ಕಚೇರಿಯಲ್ಲಿ ನಡೆದ ದಸರಾ ಕಾರ್ಯಕ್ರಮಗಳ ಪರಿಶೀಲನೆ ಹಾಗೂ ವಿಪತ್ತು ಪರಿಸ್ಥಿತಿ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನಗರದ ಸ್ವಚ್ಚತೆ ಕಾರ್ಯ ಮತ್ತಷ್ಟು ಚುರುಕುಗೊಳ್ಳಬೇಕು,ಎಲ್ಲಿಯೂ ವಿದ್ಯುತ್ ಅವಘಢಗಳಾಗದಂತೆ ಎಚ್ಚರಿಕೆವಹಿಸಬೇಕು. ಪಟಾಕಿ ದಾಸ್ತಾನುಗಳಿರುವ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸುರಕ್ಷತಾ ಕ್ರಮಗಳ ಪರಿಶೀಲಿಸಬೇಕು ಎಂದರು.
ನಗರದ ವಿವಿದೆಡೆ ನಡೆಯುತ್ತಿರುವ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತಿದ್ದು, ಕೆಲಸ ಚುರುಕುಗೊಳ್ಳಬೇಕು. ವಿವಿಧ ಉಪಸಮಿತಿಗಳು ತಮ್ಮ ಕಾರ್ಯಕ್ರಮ ಆಯೋಜನೆ ಮಾಡುವ ಮುನ್ನ ಸಂಬಂಧಿಸಿದ ಇಲಾಖೆಗಳಿಂದ ಅಗತ್ಯ ಅನುಮತಿ ಪಡೆದುಕೊಳ್ಳುವುದು ಮುಖ್ಯ. ರಸ್ತೆ ಚರಂಡಿಗಳನ್ನು ಕೂಡಲೇ ದುರಸ್ತಿಪಡಿಸಿ, ಹೊರರಾಜ್ಯ ಹಾಗೂ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಸುರಕ್ಷತೆಗೂ ಹೆಚ್ಚಿನ ಗಮನ ನೀಡಬೇಕು ಎಂದರು.
ದಸರಾ ದೀಪಾಲಂಕಾರ ಆಕರ್ಷಕವಾಗಿರುವುದರೊಂದಿಗೆ ರಸ್ತೆಗಳ ಸೌಂದರೀಕರಣಕ್ಕೂ ಒತ್ತು ನೀಡಿ, ಕುಸ್ತಿಪಟುಗಳಿಗೆ ಉತ್ತಮ ಗೌರವಧನ ನೀಡಿ, ಚಲನ ಚಿತ್ರೋತ್ಸವವನ್ನು ಹೆಚ್ಚು ಜನ ವೀಕ್ಷಿಸುವಂತೆ ಆಯೋಜನೆ ಮಾಡಿ , ಆಹಾರ ಮೇಳದಲ್ಲಿ ಎಲ್ಲಾ ಭಾಗಗಳ ಆಹಾರ ಮಳಿಗೆಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
1 ಕೋಟಿ ರೂ. ಪ್ರಾಯೋಜಕತ್ವ
ಇದೇ ವೇಳೆ ದಸರಾ ಉತ್ಸವಕ್ಕೆ 1 ಕೋಟಿ ರೂ ನೀಡಿ ಪ್ಲಾಟಿನಂ ಪ್ರಾಯೋಜಕರಾಗಲು ಒಪ್ಪಿರುವ ಸೈಕಲ್ ಬ್ರಾಂಡ್ ಅಗರಬತ್ತಿ ಕಂಪನಿ ಹಾಗೂ ಸಿಲ್ವರ್ ಪ್ರಾಯೋಜಕತ್ವ ನೀಡಿಲಿರುವ ಎಸ್.ಬಿ.ಐ.ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಡಳಿತದಿಂದ ಧನ್ಯವಾದ ಸಲ್ಲಿಸಲಾಯಿತು.