ಸುದ್ದಿಮೂಲ ವಾರ್ತೆ
ಹೊಸಕೋಟೆ,ಅ.13:ಬಿಜೆಪಿಗೆ ಮತ ಹಾಕಿದ್ರು ಎಂಬ ಕಾರಣಕ್ಕೆ ರೈತನೊಬ್ಬನ ತೋಟದಲ್ಲಿನ ಪೈಪ್ ಲೈನ್, ಕೃಷಿ ಹೊಂಡದ ಟಾರ್ಪಲಿನ್ ಕತ್ತರಿಸಿರುವ ಘಟನೆ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೊಸಕೋಟೆ ತಾಲೂಕಿನ ಬೆಟ್ಟಹಳ್ಳಿ ಗ್ರಾಮದ ರೈತ ರಾಜಣ್ಣ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದರು. ಅವರ ಮಗ ಬಿಜೆಪಿ ಪಕ್ಷದ ಪರ ಪ್ರಚಾರ ಮಾಡಿದ್ದರು ಎಂದು ಕಾಂಗ್ರೆಸ್ ಪಕ್ಷದ ಕೆಲವರು ಈ ರೀತಿ ಕಿರುಕುಳ ಕೊಡುತ್ತಿದ್ದಾರೆ ಎಂದು ರೈತ ರಾಜಣ್ಣ ಆರೋಪಿಸಿ ಅಳಲನ್ನು ತೋಡಿಕೊಂಡಿದ್ದಾರೆ.
ಚುನಾವಣೆ ಪಲಿತಾಂಶ ಬಂದ ನಂತರದ ದಿನದಿಂದ ಇದು 4 ಭಾರಿ ಈ ರೀತಿ ತೋಟದಲ್ಲಿನ ಪೈಪ್ ಲೈನ್ ಕಟ್ ಮಾಡಿ, 5ನೇ ಬಾರಿಗೆ ಕೃಷಿ ಹೊಂಡದ ಟಾರ್ಪಲಿನ್ ಕಟ್ ಮಾಡಿದ್ದಾರೆ. ಈ ವಿಚಾರವಾಗಿ 2 ಬಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುವುದಾಗಿ ತಿಳಿಸಿದರು.
ಪ್ರಮುಖವಾಗಿ ಕೃಷಿ ಹೊಂಡದಲ್ಲಿ ನೀರು ಸಂಗ್ರಹಿಸಿ 3 ಎಕರೆ ಪ್ರದೇಶದಲ್ಲಿ ವ್ಯವಸಾಯ ಮಾಡುತ್ತಿದ್ದೆ. ಈ ರೀತಿ ಕಟ್ ಮಾಡಿರುವುದರಿಂದ ನೀರು ಭೂಮಿಯಲ್ಲಿ ಇಂಗಿ ಹೋಗಲಿದ್ದು ಬೆಳೆಗಳಿಗೆ ನೀರಿಲ್ಲದೆ ಸಮಸ್ಯೆ ಆಗುತ್ತದೆ. ನಮ್ಮ ಮೇಲೆ ದ್ವೇಷ ಇದ್ದರೆ ನೇರವಾಗಿ ಎದುರಿಗೆ ಬಂದರೆ ಅವರಿಗೆ ಉತ್ತರ ನೀಡುತ್ತೇನೆ. ಆದರೆ ಈ ರೀತಿ ರಾತ್ರೋರಾತ್ರಿ
ಕೃತ್ಯ ಮಾಡಿದರೆ ನಮ್ಮ ಪರಿಸ್ಥಿತಿ ಸಂಕಷ್ಟಕ್ಕೆ ಹೋಗುತ್ತದೆ. ನಮಗೆ ಈ ರೀತಿ ಕಿರುಕುಳ ಕೊಡುತ್ತಿರುವವರನ್ನು ಪೊಲೀಸರು ಪತ್ತೆ ಹಚ್ಚಬೇಕು ಎಂದು ಮನವಿ ಮಾಡಿದ್ದಾರೆ.
ಗ್ರಾಮದ ಮುಖಂಡ ಹೇಮಂತ್ಗೌಡ ಮಾತನಾಡಿ, ಚುನಾವಣೆ ಫಲಿತಾಂಶ ಬಂದ ನಂತರದ ದಿನಗಳಿಂದ ರೈತ ರಾಜಣ್ಣ ಸೇರಿದಂತೆ ಬಿಜೆಪಿ ಪಕ್ಷಕ್ಕೆ ಓಡಾಟ ಮಾಡಿದ ಮುಖಂಡರ ತೋಟಗಳನ್ನು ಟಾರ್ಗೆಟ್ ಮಾಡಿದ್ದು, ಪೈಪ್ಗಳನ್ನು ಕತ್ತರಿಸಿ ನಷ್ಟ ಉಂಟುಮಾಡುವ ಕೆಲಸ ಮಾಡುತ್ತಿದ್ದಾರೆ. ಕಳ್ಳತನ ಮಾಡಲು ಬಂದರೆ ಪೈಪ್ ಕಳವು ಮಾಡಿಕೊಂಡು ಹೋಗುತ್ತಾರೆ. ಆದರೆ, ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡುತ್ತಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ ಎಂದರು.
ಶಾಸಕರು ಗಂಭೀರವಾಗಿ ಪರಿಗಣಿಸಿ ಕಳೆದ ದಶಕಗಳ ಹಿಂದೆ ಹೊಸಕೋಟೆ ಕ್ಷೇತ್ರದಲ್ಲಿ ವಿರೋಧ ಪಕ್ಷಗಳಲ್ಲಿ ಕೆಲಸ ಮಾಡಿದವರ ತೋಟಗಳ ಪೈಪ್ ಕತ್ತರಿಸುವುದು, ಕುರಿ, ಕೋಳಿ ಕಳವು ಮಾಡುವುದು, ಬೋರ್ ಮೋಟಾರ್ ಕಳವು ಮಾಡುವುದು ಮಾಡಿ ಕಿರುಕುಳ ಕೊಡುತ್ತಿದ್ದರು. ಎಂಟಿಬಿ ನಾಗರಾಜ್ ಕ್ಷೇತ್ರಕ್ಕೆ ಬಂದ ನಂತರ ಕಡಿವಾಣ ಹಾಕಿದ್ದರು. ಈಗ ದಶಕಗಳ ಹಿಂದಿನ ಪ್ರವೃತ್ತಿ ಮತ್ತೆ ಪ್ರಾರಂಭ ಆದಂತೆ ಕಾಣುತ್ತಿದೆ. ಆದ್ದರಿಂದ ಬೆಟ್ಟಹಳ್ಳಿ ಗ್ರಾಮದಲ್ಲಿ ರೈತ ರಾಜಣ್ಣನಿಗೆ ಆಗಿರುವ ತೊಂದರೆಯನ್ನು ಶಾಸಕರು ಗಮನಹರಿಸಿ ಗಂಭೀರವಾಗಿ ಪರಿಗಣಿಸಬೇಕು ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ರಘುವೀರ್ ಮನವಿ ಮಾಡಿದ್ದಾರೆ.