ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.13: ರಾಜಧಾನಿಯಲ್ಲಿ ಭರ್ಜರಿ ಬೇಟೆಯಾಡಿರುವ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ಗುತ್ತಿಗೆದಾರರ ಸಂಘದ ರಾಜ್ಯ ಉಪಾಧ್ಯಕ್ಷ ಅಂಬಿಕಾಪತಿ ಅವರ ನಿವಾಸದ ಮೇಲೆ ದಾಳಿ ನಡೆಸಿ 42 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿಯೇ ಐಟಿ ದಾಳಿ ರಾಜಕೀಯ ತಿರುವು ಪಡೆದುಕೊಂಡಿದ್ದು, ಹಣದ ಮೂಲದ ಬಗ್ಗೆ ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಕಳೆದೊಂದು ವಾರದಿಂದ ನಗರದ ವಿವಿಧೆಡೆ ನಿರಂತರ ದಾಳಿ ಮುಂದುವರಿಸಿರುವ ಐಟಿ ಅಧಿಕಾರಿಗಳು ಶುಕ್ರವಾರ ಭಾರಿ ಕುಳವನ್ನೇ ಬಲೆಗೆ ಕೆಡವಿದ್ದಾರೆ. ಒಂದೇ ದಿನ 42 ಕೋಟಿ ವಶಕ್ಕೆ ಪಡೆದಿರುವುದು ಸೇರಿ ಒಂದು ವಾರದಿಂದೀಚೆಗೆ ರಾಜ್ಯದಾದ್ಯಂತ ನಡೆದ ಕಾರ್ಯಾಚರಣೆಯಲ್ಲಿ 80 ಕೋಟಿಗೂ ಅಧಿಕ ನಗದನ್ನು ವಶಕ್ಕೆ ಪಡೆಯಲಾಗಿದೆ.
ಮನೆಯಲ್ಲಿ ಭಾರಿ ನಗದು ಪೇರಿಸಿಟ್ಟಿದ್ದ ಅಂಬಿಕಾಪತಿ ರಾಜ್ಯದ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ. ಅಲ್ಲದೆ, ಬಿಬಿಎಂಪಿ ಮಾಜಿ ಸದಸ್ಯೆ ಗಣೇಶ ಬ್ಲಾಕ್ನ ವಾರ್ಡ್ ನಂಬರ್ 95ರ ಮಾಜಿ ಕಾರ್ಪೊರೇಟರ್ ಅಶ್ವತಮ್ಮ ಅವರ ಪತಿ. ದಾಳಿ ಬಳಿಕ ಅಂಬಿಕಾಪತಿ, ಅವರ ಪತ್ನಿ ಅಶ್ವತ್ಥಮ್ಮ, ಇಬ್ಬರು ಪುತ್ರರನ್ನು ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ಆರಂಭಿಸಿದ್ದಾರೆ.
ಕಂತೆ ಕಂತೆ ನೋಟುಗಳು:
ಖಚಿತ ಮಾಹಿತಿ ಮೇರೆಗೆ ಆರ್ಟಿ ನಗರ ಸಮೀಪದ ಸುಲ್ತಾನ್ ಪಾಳ್ಯದಲ್ಲಿರುವ ಆತ್ಮಾನಂದ ಕಾಲೋನಿಯಲ್ಲಿರುವ ಪ್ರದೀಪ್ ಎಂಬುವರ ಮನೆ ಮೇಲೆ ಐಟಿ ದಾಳಿ ಮಾಡಲಾಗಿದೆ. ಈ ಪ್ರದೀಪ್ ಎಂಬುವರು ಅಂಬಿಕಾಪತಿ ಮಗ. ದಾಳಿ ವೇಳೆ ಪರಿಶೀಲನೆ ಮಾಡಿದಾಗ ಕಂತೆ ಕಂತೆ ನೋಟುಗಳನ್ನು ಜೋಡಿಸಿಟ್ಟಿದ್ದ 23 ಬಾಕ್ಸ್ಗಳು ಪತ್ತೆಯಾಗಿವೆ. ಇದರಲ್ಲಿ ಈಗಾಗಲೇ ಚಲಾವಣೆ ವಾಪಸ್ ಪಡೆಯಲಾದ 2000 ರೂ. ಮೊತ್ತದ ನೋಟುಗಳೂ ಸಹ ಸೇರಿವೆ. ಇವುಗಳ ಒಟ್ಟಾರೆ ಮೊತ್ತ 42 ಕೋಟಿ ರೂ. ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.
ಈ ನೋಟಿನ ಕಂತೆಗಳನ್ನು ಗುರುವಾರ ರಾತ್ರಿ ಈ ಫ್ಲ್ಯಾಟ್ನಿಂದ ಬೇರೆ ಕಡೆಗೆ ಸ್ಥಳಾಂತರಿಸಲು ಉದ್ದೇಶಿಸಲಾಗಿತ್ತು. ಆದರೆ, ಖಚಿತ ಮಾಹಿತಿ ಪಡೆದ ಐಟಿ ಅಧಿಕಾರಿಗಳು ಗುರುವಾರ ಸಂಜೆಯೇ ದಾಳಿ ನಡೆಸಿದ್ದಾರೆ. ರಾತ್ರಿ ಇಡೀ ತಪಾಸಣೆ ನಡೆಸಿ ಹಣದ ಮೊತ್ತವನ್ನು ಕಲೆಹಾಕಿ ಶುಕ್ರವಾರ ಬೆಳಗ್ಗೆ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಹಣ ಎಣಿಕೆ ಮಾಡಲು ಯಂತ್ರಗಳನ್ನು ಎಣಿಕೆ ಮಾಡಿದ್ದಾರೆ. ಇಷ್ಟೊಂದು ಭಾರಿ ಮೊತ್ತದ ನಗದು ಇಟ್ಟಿದ್ದ ರೂಮ್ ಯಾರೂ ಬಳಕೆ ಮಾಡುತ್ತಿರಲಿಲ್ಲ. ಸದಾ ಬೀಗಹಾಕಿರಲಾಗುತ್ತಿತ್ತು ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಗುತ್ತಿಗೆದಾರ ಆಗಿರುವ ಅಂಬಿಕಾಪತಿ ಅವರು ಕೆಂಪಣ್ಣ ಅವರ ಗುತ್ತಿಗೆದಾರರ ಸಂಘದಲ್ಲಿ ಉಪಾಧ್ಯಕ್ಷ ಆಗಿದ್ದರು. ಫ್ಲಾಟ್ನಲ್ಲಿ ಹೀಗೆ ಸಿಕ್ಕ ಹಣದ ಮೂಲದ ಬಗ್ಗೆ ಭಾರಿ ಅನುಮಾನಗಳು ವ್ಯಕ್ತವಾಗಿವೆ. ಈ ಹಣ ಯಾರಿಗೆ ಸೇರಿದ್ದು? ಎಲ್ಲಿಂದ ಇದನ್ನು ತಂದು ಸಂಗ್ರಹಿಸಿಡಲಾಗಿತ್ತು? ಗುರುವಾರ ಸಂಜೆ ಇದನ್ನು ಎಲ್ಲಿಗೆ ಸ್ಥಳಾಂತರಿಸಲು ಉದ್ದೇಶಿಸಲಾಗಿತ್ತು? ಎಂಬಂತಹ ಕುತೂಹಲಕಾರಿ ಪ್ರಶ್ನೆಗಳು ವ್ಯಕ್ತವಾಗಿವೆ. ಈ ಸಂಬಂಧ ಅಂಬಿಕಾಪತಿ ಮತ್ತು ಅವರ ಕುಟುಂಬದವರ ಪ್ರಾಥಮಿಕ ವಿಚಾರಣೆ ನಡೆದಿದ್ದು, ಇನ್ನೂ ದೊಡ್ಡಮಟ್ಟದ ವಿಚಾರಣೆ ಅಗತ್ಯವಿದೆ.
ರಾಜಕೀಯ ನಾಯಕರ ವಾಗ್ದಾಳಿ:
ಅಂಬಿಕಾಪತಿ ಅವರ ಫ್ಲಾಟ್ನಲ್ಲಿ ಭಾರಿ ಮೊತ್ತದ ನಗದು ಸಿಗುತ್ತಿದ್ದಂತೆ ರಾಜಕೀಯ ನಾಯಕರ ಮಧ್ಯೆ ಪರಸ್ಪರ ವಾಗ್ದಾಳಿ ಆರಂಭವಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದವರಲ್ಲಿ ಅಂಬಿಕಾಪತಿ ಅವರೂ ಸಹ ಪ್ರಮುಖರು. ಇಂತವರ ಮನೆಯಲ್ಲಿ ಇಷ್ಟು ದೊಡ್ಡ ಮೊತ್ತ ಹೇಗೆ ಬಂತು? ಇದು ಕಾಂಗ್ರೆಸ್ನ ಹಣ ಎಂದು ಬಿಜೆಪಿ ನೇರವಾಗಿ ವಾಗ್ದಾಳಿ ಮಾಡಿದೆ.
ಆಧಾರ ರಹಿತ ಆರೋಪ
ಐಟಿ ದಾಳಿ ಬಗ್ಗೆ ನಮಗೇಕೆ ಕೇಳುತ್ತೀರಿ? ಯಾವ ರಾಜ್ಯಗಳಿಗೂ ನಾವು ಹಣ ಕೊಡಲ್ಲ, ಅವರು ಕೇಳುವುದಿಲ್ಲ. ಹಣ ಹೋಗಿರುವುದು ಬಿಜೆಪಿ ಅವರು ನೋಡಿದ್ದಾರಾ? ಬಿಜೆಪಿಯವರ ಮಾಡಿದ ಎಲ್ಲಾ ಆರೋಪಗಳು ಆಧಾರ ರಹಿತ.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಪಂಚರಾಜ್ಯ ಚುನಾವಣೆ ಘೋಷಣೆ ಆಗಿದ್ದೇ ತಡ ರಾಜ್ಯದಲ್ಲಿ ಕುರುಡು ಕಾಂಚಾಣ ಕಂತೆ ಕಂತೆಯಾಗಿ ಕಾಟನ್ ಬಾಕ್ಸ್ಗಳಲ್ಲಿ ಕುಣಿಯುತ್ತಿದೆ. ಅದೂ ಮಂಚದ ಕೆಳಗೆ. ಐಟಿದಾಳಿ ವೇಳೆ ಗುತ್ತಿಗೆದಾರನ ಮನೆಯಲ್ಲಿ ಪತ್ತೆಯಾದ ಹಣ ಯಾರದ್ದು? ಯಾರ ಹೆಣದ ಮೇಲೆ ಸಂಗ್ರಹಿಸಿದ ಪಾಪದ ಹಣವಿದು? ಈ ಪ್ರಶ್ನೆಗಳಿಗೆ ಉತ್ತರ ಬೇಕಿದೆ.
-ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಟಿಎಂ ಆಗುತ್ತೆ ಎಂದು ಈ ಹಿಂದೆ ಅಮಿತ್ ಶಾ ಹೇಳಿದ್ದರು. ಇದೀಗ ಸಾಕ್ಷಿ ಸಮೇತ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಯಾವ ಕಮಿಷನ್ ಮೂಲಕ ಹಣ ಸಂಗ್ರಹಿಸಿದ್ದಾರೆ ಎಂದು ತನಿಖೆ ಆಗಲಿ. ಸಿಎಂ, ಡಿಸಿಎಂ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪಾತ್ರ ಏನು ಅಂತಾ ತನಿಖೆ ಆಗಬೇಕು. ಪತ್ತೆಯಾಗಿರುವ ದುಡ್ಡು ಪಂಚರಾಜ್ಯಗಳಿಗೆ ಎಲ್ಲೆಲ್ಲಿ ಹೋಗುತ್ತಿತ್ತೋ, ಈ ಬಗ್ಗೆ ತನಿಖೆಯಾದರೆ ಎಲ್ಲರೂ ಸಿಕ್ಕಿಹಾಕಿಕೊಳ್ಳುತ್ತಾರೆ.
– ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ
ಎಟಿಎಂ ಸರ್ಕಾರ ಅನ್ನೋದು ಈಗ ಸಾಕ್ಷಿ ಸಮೇತ ಗೊತ್ತಾಗಿದೆ. ಕೇವಲ ಸಣ್ಣ ಮೊತ್ತವಷ್ಟೇ ಸಿಕ್ಕಿದೆ, ಇನ್ನೂ ಬಹಳಷ್ಟು ಕಡೆ ಇರುತ್ತದೆ. ಕಿರುಕುಳ ನೀಡಿ ಹೆದರಿಸಿ ಕಲೆಕ್ಷನ್ ಮಾಡಿರುವ ಈ ದುಡ್ಡು ಯಾರಿಗೆ ಸೇರಿದ್ದು ಎಂದು ಗುತ್ತಿಗೆದಾರರು ಹೇಳಬೇಕು.
– ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಶಾಸಕ
ದೇಶದ ಕಾಂಗ್ರೆಸ್ ಪಕ್ಷದ ಎಟಿಎಂ ಆಗಿ ಇಲ್ಲಿನ ಸರಕಾರ ಬದಲಾಗಿದೆ. ಹಣ ಸಿಕ್ಕಿದ ಗುತ್ತಿಗೆದಾರರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಕಾಣಿಸಿಕೊಂಡಿದ್ದರು. ಇದು ಪರ್ಸಂಟೇಜ್ ಸರಕಾರ ಎಂಬುದಕ್ಕೆ ಸಾಕ್ಷಿ. ನೈತಿಕ ಹೊಣೆ ಹೊತ್ತು ಶಿವಕುಮಾರ್ ಮತ್ತು ಸಿದ್ರಾಮಣ್ಣ ರಾಜೀನಾಮೆ ಕೊಡಬೇಕು.
– ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ
ಐಟಿ ದಾಳಿ ರಾಜಕೀಯ ಪ್ರೇರಿತ: ಡಿಕೆಶಿ
ರಾಜಕೀಯ ಇಲ್ಲದೆ ಯಾವ ಐಟಿ ದಾಳಿ ನಡೆಯುವುದಿಲ್ಲ. ಕೇವಲ ನಮ್ಮಲ್ಲಿ ಮಾತ್ರ ಅಲ್ಲ ಬೇರೆ ರಾಜ್ಯಗಳಲ್ಲೂ ರಾಜಕೀಯ ಪ್ರೇರಿತ ಐಟಿ ದಾಳಿ ಆಗುತ್ತಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಪಂಚರಾಜ್ಯಗಳ ಚುನಾವಣೆಗೆ ಕರ್ನಾಟಕದಿಂದ ಹಣ ಕಳಿಸಲಾಗುತ್ತಿದೆ ಎಂಬ ಮಾಜಿ ಸಚಿವ ಅಶ್ವಥ್ ನಾರಾಯಣ ಅವರ ಆರೋಪದ ಬಗ್ಗೆ ಕೇಳಿದಾಗ, “ಹಾದಿ ಬೀದಿಯಲ್ಲಿ ಹೋಗುವವರ ಮಾತಿಗೆ ನಾನು ಉತ್ತರಿಸುವುದಿಲ್ಲ” ಎಂದು ತಿಳಿಸಿದರು.
ಬಿಬಿಎಂಪಿಯಿಂದ ಬಿಡುಗಡೆ ಆದ 650 ಕೋಟಿ ಅನುದಾನದಲ್ಲಿ ಪಡೆದ ಕಮಿಷನ್ ಹಣವನ್ನು ಅಂಬಿಕಾಪತಿ ಮೂಲಕ ಕಳಿಸುತ್ತಿದ್ದರು ಎಂಬ ಆರೋಪದ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನನಗೆ ಗೊತ್ತಿಲ್ಲ”ಎಂದು ತಿಳಿಸಿದರು.