ಸುದ್ದಿಮೂಲ ವಾರ್ತೆ
ಬೆಂಗಳೂರು, ಅ, 14; 2ನೇ ಬೆಂಗಳೂರು ಗೋಲ್ಡ್ ಶಾಪಿಂಗ್ ಫೆಸ್ಟಿವಲ್ ಅನ್ನು ದಿ ಬೆಂಗಳೂರು ಜೆವೆಲ್ಲೆರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದೆ. ಚಿನ್ನ ಮಾರಾಟದ ಪ್ರಮುಖ ಕೇಂದ್ರವಾಗಿರುವ ಬೆಂಗಳೂರು ಒಳಗೊಂಡಂತೆ ರಾಜ್ಯದ 200 ಮಳಿಗೆಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಯೋಗದಡಿ 2 ನೇ ಬೆಂಗಳೂರು ಗೋಲ್ಡ್ ಫೆಸ್ಟಿವಲ್ ಆಚರಿಸುತ್ತಿದ್ದು, ಅಕ್ಟೋಬರ್ 15 ರಿಂದ ನವೆಂಬರ್ 30 ರ ವರೆಗೆ ಚಿನ್ನ ಖರೀದಿಸಿದರೆ ಕೂಪನ್ ಮೂಲಕ 2.5 ಕೆ.ಜಿ ಚಿನ್ನ, 45 ಕೆ.ಜಿ.ಬೆಳ್ಳಿ ಗೆಲ್ಲುವ ಉಜ್ವಲ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಐದು ಸಾವಿರ ರೂಪಾಯಿಗೆ ಒಂದು ಕೂಪನ್ ನೀಡುತ್ತಿದ್ದು, ಲಕ್ಕಿಡ್ರಾ ಸಂಪೂರ್ಣವಾಗಿ ಡಿಜಿಟಲ್ ಮೂಲಕ ನಡೆಯಲಿದೆ.
ದುಬೈ ಗೋಲ್ಡ್ ಫೆಸ್ಟಿವಲ್ ಮಾದರಿಯಲ್ಲಿ ಬೆಂಗಳೂರು ಗೋಲ್ಡ್ ಫೆಸ್ಟಿವಲ್ ಆಚರಿಸುತ್ತಿದ್ದು, ಡಿಜಿಟಲ್ ಲಕ್ಕಿ ಕೂಪನ್ ಗಳ ಮಾದರಿಯನ್ನು ವಿಧಾನ ಪರಿಷತ್ ಶಾಸಕರು ಹಾಗೂ ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಡಾ. ಟಿ.ಎ.ಶರವಣ, ದಿ ಜುವೆಲ್ಲರಿ ಅಸೋಸಿಯೇಷನ್ ಸಂಘದ ಅಧ್ಯಕ್ಷ ಸುರೇಶ್ ಗನ್ನ, ಬೆಂಗಳೂರು ಗೋಲ್ಡ್ ಶಾಪಿಂಗ್ ಫೆಸ್ಟಿವಲ್ ನ ಅಧ್ಯಕ್ಷ ಡಿ.ವಿ. ರಮೇಶ್ ಬಿಡುಗಡೆ ಮಾಡಿದರು. ಹೆಸರಾಂತ ನಟ, ನಿರ್ದೇಶಕ ರಮೇಶ್ ಅರವಿಂದ್ ಗೋಲ್ಡ್ ಫೆಸ್ಟಿವಲ್ನ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ನಂತರ ಮಾತನಾಡಿದ ಡಾ.ಟಿ.ಎ ಶರವಣ, ಬೆಂಗಳೂರು ಗೋಲ್ಡ್ ಫೆಸ್ಟಿವಲ್ ಅನ್ನು ದುಬೈ ಗೋಲ್ಡ್ ಫೆಸ್ಟಿವಲ್ ಮಾದರಿಯಲ್ಲಿ ಆಚರಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಉತ್ಸವದ ಪ್ರಾಥಮಿಕ ಗುರಿಯು ದುಬೈ ಶಾಪಿಂಗ್ ಫೆಸ್ಟಿವಲ್ನಂತೆಯೇ ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ. ಹೀಗೆ ನಗರದ ವೈವಿಧ್ಯತೆಯನ್ನು ಎತ್ತಿ ಹಿಡಿಯುವುದು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಭಾನುವಾರ ಜಯನಗರದ ಗಣಪತಿ ದೇವಸ್ಥಾನದ ಬಳಿ ಮೆಗಾ ಚಿನ್ನ ಮಾರಾಟ ಮೇಳಕ್ಕೆ ಚಾಲನೆ ನೀಡಲಾಗುವುದು. 45 ದಿನಗಳ ಕಾಲ ಎಲ್ಲಾ ಮಳಿಗೆಗಳಲ್ಲಿ ಮೆಗಾ ಚಿನ್ನ, ಬೆಳ್ಳಿ ಮಾರಾಟದ ಹಬ್ಬ ನಡೆಯಲಿದೆ. ಬೆಂಗಳೂರು ನಗರವನ್ನು ಗೋಲ್ಡನ್ ಸಿಟಿಯಾಗಿ ಪರಿವರ್ತಿಸಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿದೆ. ಪ್ರವಾಸಿಗರ ಒಳಹರಿವು, ಆಭರಣ ಖರೀದಿ, ವಸತಿ, ಸಾರಿಗೆ, ಆತಿಥ್ಯ ವಲಯದ ಸೇವೆಗಳ ಮೂಲಕ ಸ್ಥಳೀಯ ಆರ್ಥಿಕತೆಗೆ ಇದು ಗಣನೀಯ ಕೊಡುಗೆ ನೀಡುತ್ತದೆ ಎಂದರು.
ಬೆಂಗಳೂರು ಮತ್ತು ತುಮಕೂರು, ಹಾಸನ ಮತ್ತು ಶಿವಮೊಗ್ಗದಂತಹ ಎರಡನೇ ಶ್ರೇಣಿಯ ನಗರಗಳಿಂದ ಹೆಚ್ಚು ಆಭರಣ ವ್ಯಾಪಾರಿಗಳು ಭಾಗವಹಿಸುತ್ತಿರುವುದು ಹಬ್ಬದ ವಿಶೇಷತೆಯಾಗಿದೆ. “ಚಿನ್ನದಲ್ಲಿ ಉಳಿಸಿ, ಚಿನ್ನವು ನಿಮ್ಮನ್ನು ಉಳಿಸುತ್ತದೆ” ಎಂಬ ಧ್ಯೇಯವಾಕ್ಯದಡಿ ಚಿನ್ನ, ಬೆಳ್ಳಿ, ಪ್ಲಾಟಿನಂ ಮತ್ತು ವಜ್ರಗಳಂತಹ ಅಮೂಲ್ಯವಾದ ಲೋಹಗಳಲ್ಲಿ ಹೂಡಿಕೆ ಮಾಡುವ ಮಹತ್ವದ ಅರಿವು ಮೂಡಿಸಲಾಗುತ್ತಿದೆ ಎಂದು ಡಾ.ಟಿ.ಎ. ಶರವಣ ಹೇಳಿದರು.