ಸುದ್ದಿಮೂಲ ವಾರ್ತೆ
ಹೊಸಕೋಟೆ, ಅ.14: ದುಶ್ಚಟಗಳು ಮತ್ತು ಮಾರಕ ಖಾಯಿಲೆಗಳು ದೇಶದ ಪ್ರಗತಿಗೆ ಮಾರಕ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಪ್ರಾದೇಶಿಕ ನಿರ್ದೇಶಕ ಸೀನಪ್ಪರವರು ತಿಳಿಸಿದ್ದಾರೆ.
ಹೊಸಕೋಟೆ ತಾಲೂಕಿನ ತಿರುಮಲ ಶೆಟ್ಟಿಹಳ್ಳಿ ಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜನಜಾಗೃತಿ ವೇದಿಕೆಯ ಸಹಭಾಗಿತ್ವದಲ್ಲಿ ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಮತ್ತು ದುಶ್ಚಟಗಳ ವಿರುದ್ದ ಜಾಗೃತಿ ಮತ್ತು ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವ ಮುಖಂಡರಾದ ವಿದ್ಯಾದರರವರ ನೇತೃತ್ವದಲ್ಲಿ ತಿರುಮಲ ಶೆಟ್ಟಿಹಳ್ಳಿಯ ಪ್ರಮುಖ ರಸ್ತೆಗಳಲ್ಲಿ ಗಾಂಧೀಜಿಯವರ ರಥ ಮೆರವಣಿಗೆ ಮಾಡಿ ಜನರಿಗೆ ಜಾಗೃತಿ ಮೂಡಿಸುತ್ತಾ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ 1400 ಮದ್ಯವರ್ಜನಾ ಶಿಬಿರಗಳ ಮೂಲಕ 1.25 ಲಕ್ಷ ಜನರು ಮದ್ಯಪಾನ ಮುಕ್ತರಾಗಿದ್ದು ಗಾಂಧೀಜಿಯವರ ಕನಸು ನನಸು ಮಾಡಲು ಅಡಿಗಲ್ಲು ಹಾಕಿದ್ದಾರೆ ಎಂದರು.
ನಂತರ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸಿ. ನಾಗರಾಜ್ ಮಾತನಾಡಿ, ಗ್ರಾಮಗಳ ಅಭಿವೃದ್ಧಿಯಾದರೆ ದೇಶ ಪ್ರಗತಿಯೆಂಬ ಗಾಂಧೀಜಿಯವರ ಆಶಯದಂತೆ ವೀರೇಂದ್ರ ಹೆಗಡೆಯವರು ಶೈಕ್ಷಣಿಕ, ಆರ್ಥಿಕ , ಸಾಮಾಜಿಕ , ಆರ್ಥಿಕ ಹಾಗೂ ಪರಿಸರ ಸಂರಕ್ಷಣೆ ಧಾರ್ಮಿಕ ಸುಧಾರಣೆ ಸೇರಿದಂತೆ ಮಹಿಳೆಯರ ಸಬಲೀಕರಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕ ಉಮರ್ ಅಬ್, ತಾಲೂಕು ಯೋಜನಾಧಿಕಾರಿ ಪುರುಷೋತ್ತಮ್ ಜನಜಾಗೃತಿ ವೇದಿಕೆ ಸದಸ್ಯರಾದ ಕಲ್ಕುಂಟೆ ಲಕ್ಷ್ಮಣ್, ದೇವರಾಜ, ಮಂಜುಳಮ್ಮ, ಜ್ಞಾನವಿಕಾಸಾಧಿಕಾರಿ ನಿಶ್ಮಿತ, ಮಾತೃಶ್ರೀ ರಾಧಮ್ಮ ಸೇರಿದಂತೆ ಒಕ್ಕೂಟ ಅದ್ಯಕ್ಷರುಗಳು ವಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.