ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಅ.14: ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ಶುಕ್ರವಾರ ನಡೆದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಸಮುದಾಯದ ಸ್ಥಳೀಯ ಮುಖಂಡರು ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶಭರಿತರಾಗಿದ್ದು, ಕಟ್ಟಾಚಾರಕ್ಕೆ ಸಭೆ ಮಾಡಲಾಗುತ್ತಿದೆ ಎಂದು ಸಭೆಯಲ್ಲಿ ಕೋಪಿತಗೊಂಡರು.
ಕೋವಿಡ್ ಕಾರಣಗಳಿಂದ ಕಳೆದ 3 ವರ್ಷಗಳಿಂದ ಸರಳವಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗುತ್ತಿದೆ. ಈ ಬಾರಿ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಬೇಕು. ಅದಕ್ಕಾಗಿ ಜಿಲ್ಲಾಡಳಿತದೊಂದಿಗೆ ಮಾತನಾಡಿ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ನಿಯೋಗ ಒತ್ತಡ ತರಬೇಕು ಎಂದು ಆಗ್ರಹಿಸಿದರು.
ಪೂರ್ವಭಾವಿ ಸಭೆಗೆ ವಾಲ್ಮೀಕಿ ಸಂಘದ ಎಲ್ಲ ಪದಾಧಿಕಾರಿಗಳನ್ನು ಆಹ್ವಾನಿಸಬೇಕು. ಪ್ರತಿ ಬಾರಿ ಈ ಕುರಿತು ಮಾಹಿತಿ ನೀಡಿರು ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಅಸಡ್ಡೆ ತೋರುತ್ತಿದ್ದಾರೆ ಎಂದು ದೂರಿದರು.
ತಹಶೀಲ್ದಾರ್ ಶಿವರಾಜ್ ಮಾತನಾಡಿ, ‘ಮುಂದಿನ ದಿನಗಳಲ್ಲಿ ಎಲ್ಲಾ ಹೋಬಳಿ, ತಾಲ್ಲೂಕು ಮಟ್ಟದ ವಾಲ್ಮೀಕಿ ಸಂಘದ ಪದಾಧಿಕಾರಿಗಳಿಗೆ ಮಾಹಿತಿ ನೀಡುವತ್ತಾ ಗಮನ ಹರಿಸಲಾಗುವುದು. ವಾಲ್ಮೀಕಿ ಜಯಂತಿ ಜಿಲ್ಲಾ ಮಟ್ಟದಲ್ಲಿ ಆಚರಣೆ ಮಾಡಬೇಕೋ ಅಥವಾ ತಾಲ್ಲೂಕು ಮಟ್ಟಕ್ಕೆ ಸೀಮಿತಗೊಳ್ಳಿಸುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದರು.
ಪಟ್ಟಣ ವೇಣುಗೋಪಾಲ ಸ್ವಾಮಿ ದೇಗುಲದಿಂದ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವಿರುವ ರಥವನ್ನು ವಿವಿಧ ಕಲಾ ತಂಡಗಳ ಮೆರಗಿನೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಭವನದ ವರೆಗೂ ಉತ್ಸವ ಮಾಡಿ, ತದನಂತರ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆಯೋಜಿಸುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯತು.
ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ನಳಿನಾಕ್ಷಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನೋದ್ ಮುಗಳಿ, ವಾಲ್ಮೀಕಿ ಸಂಘದ ಪದಾಧಿಕಾರಿಗಳಾದ ಡೈರಿ ನಾಗೇಶ್, ಯರ್ತಿಗಾನಹಳ್ಳಿ ಶಿವಣ್ಣ, ಕುಂದಾಣ ಹೋಬಳಿ ಮುಖಂಡ ಹಾಗೂ ಸಮಾಜ ಸೇವಕರಾದ ದೇವರಾಜ್, ಸಿ.ಎಂ.ರಾಮು, ಆವತಿ ರಾಮಚಂದ್ರಪ್ಪ, ಮಂಜುನಾಥ್, ಮಾಸಪ್ಪ, ಡಾ.ಮೂರ್ತಿ, ವೆಂಕಟರಾಜು, ರಾಧಕೃಷ್ಣ, ಯುವ ಮುಖಂಡ ಅಮಾನಿಕೆರೆ ರವಿ, ಸೇರಿದಂತೆ ಇತರರು ಇದ್ದರು.
ಸಭೆಗೆ ಅಧಿಕಾರಿಗಳ ಗೈರು
ತಾಲ್ಲೂಕು ಆಡಳಿತ ಸೌಧದ ನ್ಯಾಯ ಸಭಾಂಗಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವ ಭಾವಿ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಗೈರಾಗಿದ್ದರು. ಸಭೆಗೆ ಹಾಜರಾಗಬೇಕಿದ್ದ ತಾಪಂ ಇಓ ಶ್ರೀನಾಥ್ ಗೌಡರ ಪರವಾಗಿ ಗುತ್ತಿಗೆ ನೌಕರಐವಿಸಿ ಸಂಯೋಜಕ ಪ್ರಕಾಶ್ರನ್ನು ಸಭೆಗೆ ಕಳುಹಿಸಲಾಗಿತ್ತು. ಪುರಸಭೆಯ ಮುಖ್ಯಾಧಿಕಾರಿಗಳ ಬದಲಿಗೆ ಬೇರೆ ಸಿಬ್ಬಂದಿ ಸಭೆಯಲ್ಲಿ ಹಾಜರಾಗಿದ್ದರು. ಇದರಿಂದಾಗಿ ಮಹರ್ಷಿ ವಾಲ್ಮೀಕಿರವರ ಕುರಿತು ತಾಲ್ಲೂಕು ಆಡಳಿತಕ್ಕೆ ಯಾವುದೇ ಆಸಕ್ತಿಇಲ್ಲ ಎಂದು ಮುಖಂಡರು ಬೇಸರ ವ್ಯಕ್ತಪಡಿಸಿದರು.